`ವಚನ ದರ್ಶನ’ ಧರ್ಮ ವಿರೋಧಿ ಕೃತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾಲಚಕ್ರ ತಿರುಗುತ್ತಿದೆ, ಹಲವು ಬದಲಾವಣೆಗಳಾಗುತ್ತಿವೆ. ಅದೇ ತೆರನಾಗಿ ಲಿಂಗಾಯತ ಸಂಘಟನೆಗಳಿಗೂ ಇದು ಅನ್ವಯಿಸುತ್ತಿದೆ. ವೀರಶೈವ ಮಹಾಸಭೆ ಇಂದು ಲಿಂಗಾಯತ ಪದ ಜೋಡಿಸಿಕೊಂಡು ವೀರಶೈವ-ಲಿಂಗಾಯತ ಮಹಾಸಭೆಯಾಗಿ ಪರಿವರ್ತನೆಯಾಗಿದೆ. ಮುಂದೊಂದು ದಿನ ಅದು ವೀರಶೈವವನ್ನು ಕಳಚಿಕೊಳ್ಳಬಹುದು. ಈ ಬದಲಾವಣೆಯ ಪರ್ವವೇ ಅಂತಹುದು. ಇಂದು ಬಸವಣ್ಣ ಸಾಂಸ್ಕೃತಿಕ ನಾಯಕರಾಗಿದ್ದಾರೆ, ಬಸವ ತತ್ವ ಬಹುಜನರಿಗೆ ಮುಟ್ಟುತ್ತಿದೆ. ಲಿಂಗಾಯತರು ಕ್ರಮೇಣ ಸತ್ಯವನ್ನರಿಯುತ್ತಿದ್ದಾರೆ. ಅದಕ್ಕೆ ವೀರಶೈವ ಲಿಂಗಾಯತ ಮಹಾಸಭೆಯವರು `ವಚನ ದರ್ಶನ’ವೆಂಬ ಧರ್ಮವಿರೋಧಿ ಕೃತಿ ವಿರುದ್ಧದ ಹೋರಾಟದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯವರೊಂದಿಗೆ ಕೈಜೋಡಿಸಿದ್ದೇ ಸಾಕ್ಷಿಯಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಪೂ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ಅವರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ `ವಚನ ದರ್ಶನ-ಮಿಥ್ಯ, ಸತ್ಯ’ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತ, ಬಸವಧರ್ಮದ ಹುಟ್ಟಿನಿಂದಲೂ ವಿರೋಧಿಗಳಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ ತನ್ನ ತತ್ವಗಳಿಂದ ಅದು ಹಲವು ಸಂಕಟಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿಂತಿದೆ. ಆದರೆ ಪುರೋಹಿತಶಾಹಿತ್ವದ ಸಂಘಟನೆಗಳು ಇಂದೂ ಆ ಧರ್ಮದ ಮೇಲೆ ಹಿಡಿತ ಸಾಧಿಸಲು, ಅದನ್ನು ಮುಗಿಸಲು ಹೊಂಚುಹಾಕುತ್ತಿವೆ. ಅದರ ಕೈಗನ್ನಡಿಯೇ `ವಚನ ದರ್ಶನ’ವೆಂಬ ಕೃತಿಯಾಗಿದೆ.

ಸಂಘಪರಿವಾರ ಮೂಲದ ಅಯೋಧ್ಯ ಪ್ರಕಾಶನದಿಂದ ಪ್ರಕಟಿತ ಈ ಕೃತಿಯಲ್ಲಿ ಬಸವಾದಿ ಶರಣರ ಆಶಯಗಳಿಗೆ ವಿರುದ್ಧವಾದ ಅಂಶಗಳೇ ತುಂಬಿವೆ. ಯಾವ ಶರಣರು ಸದಾ ವಿರೋಧಿಸುತ್ತ ಬಂದಿದ್ದರೋ ಆ ವರ್ಣಾಶ್ರಮ ಸಂಸ್ಕೃತಿಯನ್ನು ಪೋಷಿಸಿದ್ದಾರೆನ್ನುವ ರೀತಿಯಲ್ಲಿ ಈ ಗ್ರಂಥದ ಲೇಖನಗಳಲ್ಲಿ ಮೂಡಿ ಬಂದಿದೆ. ಇದು ಬಸವಾಭಿಮಾನಿಗಳಲ್ಲಿ ಆಕ್ರೋಶ, ಕಳವಳವನ್ನು ಹುಟ್ಟು ಹಾಕಿದ್ದು, ಈ ಗ್ರಂಥಕ್ಕೆ ಉತ್ತರವಾಗಿ ಜಾಲಿಂಮ ಸಂಘಟನೆಯಿಂದ `ವಚನ ದರ್ಶನ ಮಿಥ್ಯ, ಸತ್ಯ’ ಗ್ರಂಥ ಪ್ರಕಟವಾಗುತ್ತಿದೆ. ಅನೇಕ ಹಿರಿಯರು ಅಭ್ಯಾಸಪೂರ್ಣವಾಗಿ ಬರೆದ ಲೇಖನಗಳ ಉತ್ತರವೇ ಈ ಗ್ರಂಥವಾಗಿದೆ ಎಂದು ಪೂಜ್ಯರು ನುಡಿದರು.

ಈ ಗ್ರಂಥದಲ್ಲಿ ಶರಣರ ನೈಜ ವಿಚಾರಗಳನ್ನು ಪ್ರಸ್ತುತಪಡಿಸಿದ್ದೇವೆ. ಸದ್ಯ ಈ ಗ್ರಂಥ ಲೋಕಾರ್ಪಣೆಯಾಗುತ್ತಿದೆ. ಇದನ್ನು ರಾಜ್ಯದ ಹಲವೆಡೆ ಬಿಡುಗಡೆಗೊಳಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ತುಂಬ ಉತ್ಸಾಹದಿಂದ ಕಾರ್ಯಗೈಯುತ್ತಿರುವ ಜಾಗತಿಕ ಲಿಂಗಾಯತ ಮಹಾಸಭೆಯವರ ಜೊತೆಗೆ ವೀರಶೈವ ಮಹಾಸಭೆಯವರು ಕೈಜೋಡಿಸಿದ್ದು ಮಹತ್ವಪೂರ್ಣವಾಗಿದೆ ಎಂದರು.

ಹಲವಾರು ಲಿಂಗಾಯತ ಸಂಘಟನೆಗಳಿವೆ. ನಮ್ಮಲ್ಲಿನ ಹಲವು ಪೂರ್ವಾಗ್ರಹ ಪೀಡಿತ ಮನೋಭಾವಗಳನ್ನು ತೊಡೆದು ಹಾಕಿ ಬಸವಣ್ಣನನ್ನೇ ಆರಾಧ್ಯ, ವಚನಗಳೇ ದಾರಿದೀಪ ಮಾಡಿಕೊಂಡಲ್ಲಿ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಉಳಿಸಲು ಸಾಧ್ಯವಿದೆ ಎಂದರು.

ಇದೇ ಸಮಾರಂಭದಲ್ಲಿ ಮಾತನಾಡಿದ ಶಿವಾನಂದ ಮಠದ ಪೂ. ಅಭಿನವ ಶಿವಾನಂದ ಮಹಾಸ್ವಾಮಿಗಳು, ವಚನ ದರ್ಶನ ಪುಸ್ತಕದ ಗೌರವ ಸಂಪಾದಕ ಸದಾಶಿವಾನಂದ ಸ್ವಾಮಿ ಅವರ ನಿಲುವು ವೈಯಕ್ತಿಕವಾದುದು. ಅದು ನಮ್ಮ ಮಠಕ್ಕೆ ಯಾವುದೇ ಸಂಬಂಧವಿಲ್ಲ. ಅವರದು ಅಕ್ಷಮ್ಯವಾದ ನಡೆ ಎಂದು ಹೇಳಿದರು.

ನಂತರ ಮೂರುಸಾವಿರ ಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಗಳು, ಹುಬ್ಬಳ್ಳಿಯವರು ಮಾತನಾಡಿದರು.

ವಚನಗಳು ಈ ನಾಡಿನ ಸಂಪತ್ತು. ನಮ್ಮದು ಬಸವ ತತ್ವ ಬೆಂಬಲಿಸುವ ಮಠ, ಆದರೆ ಬಸವ ತತ್ವಕ್ಕೆ ವ್ಯತಿರಿಕ್ತವಾಗಿರುವ ಶ್ರೀಗಳ ಅಭಿಪ್ರಾಯಕ್ಕೆ ಯಾವುತ್ತೂ ನಮ್ಮ ಒಪ್ಪಿಗೆಯಿಲ್ಲ. ಅದು ನಮ್ಮ ಮಠದ ಪರಂಪರೆಯೂ ಅಲ್ಲ. ಅವರ ವಿಚಾರಗಳನ್ನು ನಾವು ಖಂಡಿಸುತ್ತೇವೆ. ಶಿವಾನಂದ ಪರಂಪರೆಯಂತೆ ನಾವು ಶರಣತತ್ವ ಒಪ್ಪುವೆವು. ನಮ್ಮ ಮಠದಲ್ಲಿ ಜಾತಿ ನೋಡದೆ ಲಿಂಗಧಾರಣೆ ಮಾಡಿದ್ದೇವೆ. ಕುರುಬ ಜನಾಂಗ, ತಳವಾರ ಜನಾಂಗದವರನ್ನು ನಮ್ಮ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ಮಾಡಿದ್ದು ಇದೆ. ಮಠದ ತತ್ವಕ್ಕೆ ಆಕರ್ಷಿತರಾಗಿ ಬಂದು ದೀಕ್ಷೆ ಪಡೆದ ಮುಸ್ಲೀಂರೊಬ್ಬರನ್ನು ರೋಣ ಮಠಕ್ಕೆ ಸ್ವಾಮಿಗಳಾಗಿ ನೇಮಕ ಮಾಡಲಾಗಿತ್ತೆಂದು ಪೂ. ಅಭಿನವ ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here