ಜಗದ ತಲ್ಲಣಗಳಿಗೆ ವಚನ ಸಾಹಿತ್ಯವೇ ಉತ್ತರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಪ್ರಮಥರ ಈ ನೆಲದಲ್ಲಿ ಶರಣರ ತತ್ವಗಳನ್ನು ಪಸರಿಸಲು ಮಠ-ಮಾನ್ಯಗಳ ಜೊತೆಗೆ ಬಸವ ಪರ ಸಂಘಟನೆಗಳು ನಿರಂತರ ಕಾರ್ಯಶೀಲವಾಗಿವೆ. ವಚನಗಳು ಲಿಂಗಾಯತ ನಿಜದ ನೆಲೆಯನ್ನು ತಿಳಿಸುವವು. ಬಸವಾದಿ ಶರಣರು ಕಟ್ಟಿಕೊಟ್ಟ ಅನುಭವ ಮಂಟಪದ ಭವ್ಯ ಸಂಸ್ಕೃತಿಯನ್ನು ಮನೆ ಮನೆಗಳಲ್ಲಿ ಅರುಹುವದೇ `ವಚನ ಶ್ರಾವಣ’ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಶರಣ ತತ್ವ ಚಿಂತಕ ಅಶೋಕ ಬರಗುಂಡಿ ತಿಳಿಸಿದರು.

Advertisement

ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಂಜನೇಯ ಬಂಗಾರಪ್ಪ ಕಟಗಿ ಇವರ ಮನೆಯಲ್ಲಿ ನಡೆದ ಬಸವಣ್ಣನವರ 858ನೇ ಸ್ಮರಣೆಯಂಗವಾಗಿ ಮಾಸಪರ್ಯಂತ ನಡೆಯುವ `ವಚನ ಶ್ರಾವಣ-2025’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಶರಣ ಪರಂಪರೆ ಬಹುದೊಡ್ಡದು. ಶರಣರ ಆಶಯವೇ ಸಮಸಮಾಜ ನಿರ್ಮಿತಿಯಾಗಿತ್ತು. ವಚನ ಸಾಹಿತ್ಯ ಸಂಗ್ರಹಿಸಿ ನಮಗೆ ನೀಡಿದ ಹಳಕಟ್ಟಿಯವರ ಕಾರ್ಯ ಸ್ಮರಣೀಯವಾದುದು. ಅದರಲ್ಲೂ ಅವರ ವಚನಗಳ ಸ್ಥಲಕ್ಕನುಸಾರವಾದ ಜೋಡಣೆ ಕೂಡಾ ಅದ್ಭುತವಾಗಿದೆ. ಶರಣ ಸಂಸ್ಕೃತಿಯ ಸರ್ವರೂ ಅವರನ್ನು ನೆನೆಯಬೇಕಾಗಿದೆ. ಈ ಜೀವ ಜಗತ್ತಿನ ಸರ್ವ ತಲ್ಲಣಗಳಿಗೆ ವಚನ ಸಾಹಿತ್ಯ ಉತ್ತರದಾಯಿನಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಸವದಳದ ಅಧ್ಯಕ್ಷ ವಿ.ಕೆ. ಕರೀಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಕಟಗಿ ಮನೆತನದ ಹಿರಿಯರಾದ ಬಂಗಾರಪ್ಪನವರು ನೆರವೇರಿಸಿದರು. ಧ್ವಜ ಗೀತೆಯನ್ನು ಬಸವದಳದ ಶರಣೆಯರು ಹಾಡಿದರು. ಆಂಜನೇಯ ಕಟಗಿ ಸ್ವಾಗತಿಸಿದರು. ಎಸ್.ಎ. ಮುಗದ ಸಂವಿಧಾನ ಪೀಠಿಕೆಯನ್ನು ಓದಿಸಿದರು. ಅಶ್ವಿನಿ ಕಟಗಿಯವರಿಂದ ವಚನ ಪಠಣ ಜರುಗಿತು. ಗದಗ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಕೆ.ಎಸ್. ಚೆಟ್ಟಿ ವಚನ ಶ್ರಾವಣದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ವಚನ ಓದುವ ಮೂಲಕ ಉದ್ಘಾಟಿಸಿದರು.

`ವಚನ ಶ್ರಾವಣ’ ಹೊತ್ತಿಗೆಯನ್ನು ಬಿ.ವಿ. ಕಾಮಣ್ಣನವರ ಸ್ಮರಣಾರ್ಥ ಮಂಗಳಾ ಕಾಮಣ್ಣವರ ಹಾಗೂ ಚೆನ್ನಬಸವಣ್ಣ ಕಾಮಣ್ಣವರ ಗ್ರಂಥದಾಸೋಹ ಮಾಡಿದರು. ವಚನ ಚಿಂತಕರಿಗೆ `ವಚನ ಹೃದಯ’ ಗ್ರಂಥವನ್ನು ಲಿಂ. ಶಂಕ್ರಣ್ಣ ಅಂಗಡಿ ಇವರ ಸ್ಮರಣಾರ್ಥ ಇವರ ಧರ್ಮಪತ್ನಿ ಲಕ್ಷ್ಮೀ ಅಂಗಡಿ, ಶರಣು ಅಂಗಡಿ ದಾಸೋಹಗೈದರು. `ಬಸವಣ್ಣ ಯಾಕೆ ಬೇಕು’ ಗ್ರಂಥವನ್ನು ಶೇಖಣ್ಣ ಕವಳಿಕಾಯಿ ಹಾಗೂ ವಿಭೂತಿ ದಾಸೋಹವನ್ನು ಮಂಜುಳಾ ಹಾಸಿಲಕರ ವಹಿಸಿಕೊಂಡಿದ್ದರು. ಗೌರಕ್ಕಾ ಬಡಿಗಣ್ಣನವರ ಶರಣು ಸಮರ್ಪಣೆ ಮಾಡಿದರು. ಪ್ರಕಾಶ ಅಸುಂಡಿ ನಿರೂಪಿಸಿದರು.

ಶ್ರೀಗುರು ಬಸವೇಶ್ವರಮಠದ ಮ.ನಿ.ಪ್ರ. ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ಮಾತನಾಡಿ, ಈ ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಅವುಗಳು ತಮ್ಮದೇ ಸಿದ್ಧಾಂತ ಹೊಂದಿವೆ. ಆದರೆ ಅವೆಲ್ಲಕ್ಕಿಂತಲೂ ಭಿನ್ನವಾದ ಧರ್ಮ ಲಿಂಗಾಯತವಾಗಿದೆ. ಬಸವಾದಿ ಶರಣರು ನುಡಿದು, ಹಾಗೆಯೇ ನಡೆದು ತೋರಿಸಿದರು. ಹಲವು ಜಾತಿ, ಧರ್ಮಗಳಲ್ಲಿ ಪ್ರಾಣಿ ಬಲಿಯಂತಹ ಪದ್ಧತಿ ಈಗಲೂ ಇದೆ. ಪ್ರಾಣಿಗಳನ್ನು ಕೊಂದು ತಿಂದರೆ ದೇವರು ಸಂತೃಪ್ತನಾಗುವನೆಂಬ ಭಾವ ತುಂಬಿದೆ. ಅಲ್ಲಿ ಕರುಣೆ ಇಲ್ಲವೇ ಇಲ್ಲ. ಆದರೆ ಬಸವಣ್ಣ ಧರ್ಮ ಇದಕ್ಕೆ ವ್ಯತಿರಿಕ್ತವಾಗಿದೆ. ಅಲ್ಲಿ ಕರುಣೆ ತುಂಬಿದೆ. ದಯವೇ ಧರ್ಮವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here