ವಚನಗಳ ಸಾರದೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಲಿ

0
Vachana Sahitya Protection Day Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ.ಫ.ಗು ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಅವರ ವಚನ ಸಾಹಿತ್ಯದ ಮೇಲಿನ ಕಾಳಜಿಯಿಂದ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಪಾತ್ರ ವಹಿಸಿದರು.

ಬ್ರಿಟಿಷ್‌ರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿರಲಿಲ್ಲ. ಅವರಿಗೆ ಎದುರಾದ ಅಡೆ-ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಡವಾದ ಇಚ್ಛಾಶಕ್ತಿಯನ್ನು ತಿಳಿಸುತ್ತದೆ ಎಂದರು.

ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಮನೆಮನೆಗೆ ತಲುಪುವ ಕಾರ್ಯವಾಗಬೇಕು. ಯುವ ಜನಾಂಗದ ವಚನ ಸಾಹಿತ್ಯವನ್ನು ಅರಿತು ತಮ್ಮ ಜೀವನವನ್ನು ಕಟ್ಟಿಕೊಳ್ಳುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯವಾಗಬೇಕು ಎಂದು ಜಗದ್ಗುರು ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನ ಸಾಹಿತ್ಯ ದಿನಾಚರಣೆಯ ಶುಭಾಶಯ ಕೋರಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನ ಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು. ಹಳಕಟ್ಟಿಯವರ ಕಾರ್ಯ ಶ್ಲಾಘನೀಯವಾದದ್ದು. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಜಯಪುರದ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಬಾವಿ ಉಪನ್ಯಾಸ ನೀಡುತ್ತ, ಡಾ. ಫ.ಗು. ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ವಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಳೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು. ಅವರು ಮಾಡಿದ ಮಹತ್ಕಾರ್ಯವನ್ನು ಇತಿಹಾಸ ನೆನಪಿಡುವಂತದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಗಣ್ಯರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸ್ವಾಗತಿಸಿದರು. ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತ ಪಡಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.

ಹಳಕಟ್ಟಿಯವರು 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತç ಪ್ರವೀಣ, ವಚನ ಶಾಸ್ತç ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಫ.ಗು. ಹಳಕಟ್ಟಿಯವರ ಜೀವನ ಮತ್ತು ಸಾಧನೆಯ ಪ್ರಮುಖ ವಿಷಯಗಳ ಕುರಿತು ಡಾ. ಎಂ.ಎಸ್. ಮದಬಾವಿ ಉಪನ್ಯಾಸ ನೀಡಿದರು.

 


Spread the love

LEAVE A REPLY

Please enter your comment!
Please enter your name here