4 ವರ್ಷವಾದರೂ ಮುಗಿಯದ ಕಾಮಗಾರಿ

0
Vadavi Morarji Residential School
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿಯು ವಿಧಾನಸಭಾ ಕ್ಷೇತ್ರ ಎಸ್.ಸಿ (ಮೀಸಲು) ಮತಕ್ಷೇತ್ರವಾಗಿದ್ದು, ಈ ಭಾಗದಲ್ಲಿಯ ಎಸ್.ಸಿ ಸಮುದಾಯದ ಮಕ್ಕಳಿಗೆ ವಸತಿ ಸಹಿತ ಶಿಕ್ಷಣವನ್ನು ನೀಡುವುದಕ್ಕೆ ವಡವಿ ಗ್ರಾಮಕ್ಕೆ ಮೊರಾರ್ಜಿ ವಸತಿ ಶಾಲೆಯನ್ನು ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೂ ಸಹ ಅಸ್ತು ಎಂದಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಲೋ ಏನೋ ನಿರ್ಮಾಣ ಕಾರ್ಯ 4 ವರ್ಷ ಗತಿಸಿದರೂ ಪೂರ್ಣಗೊಂಡಿಲ್ಲ. ಹೀಗಾಗಿ ಈ ಶಾಲೆಯ ಪ್ರಾರಂಭಕ್ಕೆ ಮುಹೂರ್ತ ಯಾವಾಗ ಎಂಬ ಪ್ರಶ್ನೆ ಈ ಭಾಗದಲ್ಲಿಯ ಜನತೆಯನ್ನು ಕಾಡುತ್ತಿದೆ.

Advertisement

ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇದರ ವತಿಯಿಂದ 2020ರ ಜುಲೈ 17ರಂದು ಅಂದಿನ ಶಾಸಕ ರಾಮಣ್ಣ ಲಮಾಣಿ ವಡವಿ ಗ್ರಾಮದ ಹೊರವಲಯದಲ್ಲಿಯ 10 ಎಕರೆ 5 ಗುಂಟೆಯ ವಿಶಾಲವಾದ ಜಮೀನಿನಲ್ಲಿ ಅಂದಾಜು 19 ಕೋಟಿ ರೂ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಇದೀಗ 21 ಕೋಟಿ ರೂ ಅಂದಾಜು ವೆಚ್ಚವಿದೆ. ಆದರೆ ಇಲ್ಲಿಯವರೆಗೂ ವಸತಿ ಶಾಲೆಯ ನಿರ್ಮಾಣದ ಪೂರ್ಣ ಪ್ರಮಾಣದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರ ಪರಿಣಾಮ, ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾದರೂ ಸಹ ಮುಗಿಯದೇ ಇರುವುದಕ್ಕೆ ಈ ಭಾಗದಲ್ಲಿಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸುಸಜ್ಜಿತ ಕಟ್ಟಡ ಲಭ್ಯವಾಗದ ಕಾರಣ ಈ ಶಾಲೆಯನ್ನು ಲಕ್ಷ್ಮೇಶ್ವರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ತಿಂಗಳಿಗೆ ಲಕ್ಷಾಂತರ ಬಾಡಿಗೆ ವ್ಯಯಿಸಿ ವಸತಿ ಶಾಲೆಯನ್ನು ನಡೆಸಲಾಗುತ್ತಿದೆ. ಸದ್ಯ ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ-50, 8ನೇ ತರಗತಿಯಲ್ಲಿ-45, 9ನೇ ತರಗತಿಯಲ್ಲಿ-49 ಹಾಗೂ 10ನೇ ತರಗತಿಯಲ್ಲಿ 41 ವಿದ್ಯಾರ್ಥಿಗಳಿದ್ದಾರೆ. 6ನೇ ತರಗತಿಗೆ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿರುವದರಿಂದ ಈ ವರ್ಗಕ್ಕೂ ಸಹ 40 ವಿದ್ಯಾರ್ಥಿಗಳು ಬರುವವರಿದ್ದು, ಒಟ್ಟೂ ಸುಮಾರು 240 ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲಿಯೇ ಶಿಕ್ಷಣ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.

ವಡವಿ ಗ್ರಾಮದಿಂದ ಸುಮಾರು 1 ಕಿಮೀ ದೂರದಲ್ಲಿ ಇರುವ ಈ ವಸತಿ ಶಾಲೆ ಕಟ್ಟಡದ ಕಾಮಗಾರಿ ಕಳಪೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗುಣಮಟ್ಟದ ಪರಿಶೀಲನೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಎಇಇ ಬಿ. ಚಂದ್ರಶೇಖರ, ಕಾಮಗಾರಿ ವಿಳಂಬವಾಗಿದ್ದು, ಇನ್ನು 15-20 ದಿನಗಳಲ್ಲಿ ಮುಗಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಪ್ರತಿಕ್ರಿಯಿಸಿ, ಈ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಲೋಕಾರ್ಪಣೆಗೊಳಿಸುವಂತೆ ಸೂಚಿಸಲಾಗಿತ್ತು. ಇದೀಗ ಮತ್ತೆ ಸಮಯ ಕೇಳುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯರಾದ ರಾಜೀವರೆಡ್ಡಿ ಬಮ್ಮನಕಟ್ಟಿ, ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿಲ್ಲ. ಅವಧಿ ಮೀರಿ ತಿಂಗಳಿಗೆ ಲಕ್ಷಾಂತರ ರೂ ವ್ಯಯಿಸಿ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಈ ಭಾಗದಲ್ಲಿ ಎಸ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇದರಿಂದ ಅಡ್ಡಿಯಾಗುತ್ತಿದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

 


Spread the love

LEAVE A REPLY

Please enter your comment!
Please enter your name here