ಬೆಂಗಳೂರು: ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಈ ವರ್ಷ ಎರಡು ಬಾರಿ ವೈಕುಂಠ ಏಕಾದಶಿ ಬಂದಿರುವುದು ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿದೆ.
ತಿರುಪತಿ ತಿರುಮಲಕ್ಕೆ ತೆರಳಲು ಸಾಧ್ಯವಾಗದ ಭಕ್ತರಿಗೆ ತಿರುಪತಿಯ ಅನುಭವ ನೀಡುವ ಉದ್ದೇಶದಿಂದ ದೇಗುಲದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಇಂದು ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ.
ಭಕ್ತರ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ವಯೋವೃದ್ಧರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಭಕ್ತರಿಗೆ ಬೆಳಿಗ್ಗೆ 3:30 ರಿಂದ ರಾತ್ರಿ 9 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.



