ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ಮಧ್ಯಭಾಗದಲ್ಲಿರುವ 34 ಎಕರೆ ವ್ಯಾಪ್ತಿಯ ವಕಾರಸಾಲಿನಲ್ಲಿ ಅನಧಿಕೃತವಾಗಿ ಬಿದಿರು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ವಕಾರಸಾಲು ತೆರವು ನಂತರ ಅನಧಿಕೃತವಾಗಿ ಬಿದಿರು ಮಾರಾಟದಲ್ಲಿ ನಿರತರಾಗಿದ್ದ ಸ್ಥಳಗಳ ಮೇಲೆ ಗುರುವಾರ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ, ಬಿದಿರು ತೆರವುಗೊಳಿಸಲು ಮುಂದಾದರು. ಈ ವೇಳೆ ವ್ಯಾಪಾರಸ್ಥರು ಮತ್ತು ನಗರಸಭೆ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.
ಈ ವೇಳೆ ಬಿದಿರು ತೆರವು ಮಾಡಿಕೊಳ್ಳಲು ವ್ಯಾಪಾರಸ್ಥರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಒಪ್ಪಿಗೆ ನೀಡಿ ಅಲ್ಲಿಂದ ತೆರಳಿದರು.
ಈ ವೇಳೆ ಮಾತನಾಡಿದ ಬಿದಿರು ವ್ಯಾಪಾರಸ್ಥರು, ವಕಾರಸಾಲು ಅತಿಕ್ರಮಣ ತೆರವು ನಂತರ ಆ ಪ್ರದೇಶದಕ ಅಕ್ಕಪಕ್ಕದ ನಿವಾಸಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ವಾಹನ ಚಾಲಕರು ಪಾರ್ಕಿಂಗ್ ಜಾಗ ಮಾಡಿಕೊಂಡಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಬೆರಳೆಣಿಕೆಯ ವ್ಯಾಪರಸ್ಥರ ಮೇಲೆ ದಬ್ಬಾಳಿಕೆ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.