ಶಿಗ್ಗಾಂವಿ: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಇನ್ನೂ ಈ ಬಗ್ಗೆ ಭೂದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಂದಾಯ ಕಾನೂನುಗಳನ್ನು ನಿರ್ಲಕ್ಷಿಸಲಾಗುತ್ತಿದ್ದು, ಇದರಿಂದ ರಾಜ್ಯಾದ್ಯಂತ ಕೃಷಿ ಭೂಮಿಯನ್ನು ವಕ್ಫ್ ಆಸ್ತಿ ಎಂದು ತಪ್ಪಾಗಿ ಹೆಸರಿಸಲಾಗುತ್ತಿದೆ. ಜಮೀನು ವಿಚಾರದಲ್ಲಿ ಕಂದಾಯ ದಾಖಲೆಗಳನ್ನು ನಿರ್ಣಾಯಕ ಎಂದು ಪರಿಗಣಿಸಬೇಕು. ಆದರೆ, ಆ ಕಾನೂನು ಕಡೆಗಣಿಸಿ ಅದಾಲತ್ ಪ್ರಕಾರ ಆಗಿದ್ದೇ ಅಂತಿಮ ಎಂದು ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಹಿಂದೆ ಇಂತಹ ಪ್ರಕರಣ ಆದಾಗ ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ ಅವರಿಗೆಲ್ಲ ನ್ಯಾಯ ಸಿಕ್ಕಿದೆ. ಯಾರೋ ಒಬ್ಬರು ಅರ್ಜಿ ಹಾಕಿದರೆ ಇಡೀ ರಾಜ್ಯದ ರೈತರ ಆಸ್ತಿಗೆ ವಕ್ಪ್ ಆಸ್ತಿಯೆಂದು ರೈತರಿಗೆ ನೊಟೀಸ್ ನೀಡುವ ಮೂಲಕ ಸರ್ಕಾರದಿಂದ ಅರಾಜಕತೆ, ಗಾಬರಿ ಉಂಟು ಮಾಡುವ ಕೆಲಸ ನಡೆದಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.



