ನವದೆಹಲಿ: ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾರತದ ರಾಷ್ಟ್ರೀಯ ಚರ್ಚುಗಳ ಮಂಡಳಿ (ಎನ್‌ಸಿಐಸಿ) ಸಲ್ಲಿಸಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ, ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ತಮ್ಮ ಉತ್ತರ ಸಲ್ಲಿಸುವಂತೆ ಆದೇಶಿಸಿದೆ.
ಅಲ್ಲದೆ, ಈ ಹೊಸ ಅರ್ಜಿಗಳನ್ನು ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಿ, ಮೂವರು ನ್ಯಾಯಾಧೀಶರ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಎನ್‌ಸಿಐಸಿ ತನ್ನ ಅರ್ಜಿಯಲ್ಲಿ, ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿದೆ.
ಈ ಕಾನೂನುಗಳು ಸಂವಿಧಾನದ 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುತ್ತಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಹತ್ತಿಕ್ಕುತ್ತವೆ ಎಂದು ಆರೋಪಿಸಲಾಗಿದೆ.ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೇ ರೀತಿಯ ಅರ್ಜಿಗಳು ಈಗಾಗಲೇ ಬಾಕಿ ಇದ್ದು, ಕೇಂದ್ರದ ಉತ್ತರ ಸಿದ್ಧವಾಗಿದೆ.
ಶೀಘ್ರದಲ್ಲೇ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಜೊತೆಗೆ ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗುಜರಾತ್, ಜಾರ್ಖಂಡ್, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಈ ಮೊದಲು ಕಳೆದ ಸೆಪ್ಟೆಂಬರ್ 16ರಂದು, ಮತಾಂತರ ವಿರೋಧಿ ಕಾನೂನುಗಳ ಜಾರಿಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ವೇಳೆ, ರಾಜ್ಯ ಸರ್ಕಾರಗಳ ನಿಲುವು ತಿಳಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.



