ಇಡೀ ಸಂಪುಟವೇ ಭ್ರಷ್ಟಾಚಾರದಲ್ಲಿ ಮುಳುಗಿದೆ : ಬೊಮ್ಮಾಯಿ

0
Valmiki Corporation money used for election funding
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ, ಭ್ರಷ್ಟಾರದಲ್ಲಿ ಮುಳುಗಿರುವ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿದೆ. ಇಡೀ ಕ್ಯಾಬಿನೆಟ್ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಸಚಿವರ ರಾಜೀನಾಮೆ ಕೇಳುವ ನೈತಿಕತೆಯನ್ನು ಸಿಎಂ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್‌ಸಿ/ಎಸ್‌ಟಿ ಸಮುದಾಯವನ್ನು ಉದ್ಧರಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಕೊಟ್ಟ ಹಣ ಎಸ್‌ಟಿ ಜನಾಂಗಕ್ಕೆ ಉಪಯೋಗವಾಗಬೇಕಿತ್ತು. ಆ ಹಣವನ್ನ ಲೂಟಿ ಮಾಡಿದ್ದಾರೆ. 14 ಅಕೌಂಟ್‌ಗಳ ಮೂಲಕ ಬೇರೆ ಬೇರೆ ಕಡೆ ಹಣ ಹೋಗಿದೆ. 94 ಕೋಟಿ ರೂಪಾಯಿ ಹಿರಿಯ ಅಧಿಕಾರಿಗಳ ಆಶೀರ್ವಾದ ಇಲ್ಲದೆ ದೋಚಲು ಸಾಧ್ಯವಿಲ್ಲ. ಈಗಾಗಲೇ ಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು. ಈಶ್ವರಪ್ಪ ಅವರ ವಿಷಯ ಬಂದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಅರಚಾಡಿದ್ದೇ ಬಂತು. ಈಗ ನಿಮ್ಮ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯಗಳ ಪಾತ್ರವೂ ಇದ್ದು, 14 ಅಕೌಂಟ್ ಹಿಡಿದು ವಿಚಾರಿಸಿದರೆ ಎಲ್ಲ ಸತ್ಯ ಹೊರಬೀಳುತ್ತದೆ. ಮುಕ್ತವಾದ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ಕೊಡಲಿ. ಈಶ್ವರಪ್ಪ ಪ್ರಕರಣ, ಸದರಿ ಪ್ರಕರಣ ಬೇರೆಯೇ ಎಂದು ಗೃಹ ಸಚಿವರು ಹೇಳುತ್ತಾರೆ. ಈಶ್ವರಪ್ಪ ಅವರ ಪ್ರಕರಣಕ್ಕಿಂತಲೂ ಇದು ಗಂಭೀರವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಯಾವ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರವಾಗಿತ್ತೋ ಆ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಘಟನೆ ನಡೆದಿಲ್ಲವಾಗಿದ್ದರೆ ಕೇಸ್ ಹೊರ ಬರುತ್ತಿರಲಿಲ್ಲ. ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳದಲ್ಲೂ ಕಾಂಗ್ರೆಸ್ ಯಾವುದೇ ದಿಟ್ಟ ಕ್ರಮ ತೆಗೆದುಕೊಂಡಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ಆ ಕ್ರಮ ತೆಗೆದುಕೊಂಡಿದ್ದೆ.

ಎಸ್‌ಟಿಪಿ, ಟಿಎಸ್‌ಪಿ ಅಡಿ ಪರಿಶಿಷ್ಟರಿಗೆ ಇಟ್ಟ ಹಣವನ್ನ ಗ್ಯಾರಂಟಿಗೆ ತಿರುಗಿಸಲಾಗಿದೆ ಎಂದು ಆರೋಪಿಸಿದರು.

ಮಹಾತ್ಮ ಗಾಂಧೀಜಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಅರ್ಥ ಮಾಡಿಕೊಳ್ಳಬೇಕು.

ಮೋದಿ ಅವರು ಗುಜರಾತ್‌ನವರು. ಅವರಿಗೆ ಗಾಂಧೀಜಿ ಬಗ್ಗೆ ಗೊತ್ತಿಲ್ಲವೆಂದಲ್ಲ. ಅವರು ಹೇಳುವ ತಾತ್ಪರ್ಯ, ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಗಾಂಧೀಜಿಯವರನ್ನು ಪರದೆ ಹಿಂದೆ ಇಟ್ಟಿದ್ದರು. ಈಗ ಗಾಂಧಿ ಕುಟುಂಬ ಮುಂದೆ ಬಂದಿದೆ. ಸ್ವಾತಂತ್ರ್ಯ ನಂತರ ಎಲ್ಲಿಯೇ ಹೋದರೂ ನೆಹರು ಹೆಸರು ಬರುತ್ತಿತ್ತು. ಮಹಾತ್ಮಾ ಗಾಂಧಿ ಹಿಂದೆ ಸರಿದರು ಎನ್ನುವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಈ ಹಗರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ. ಯಾವ ಹಾಲಿ ಸಚಿವರ ವಿರುದ್ಧ ಸಿಐಡಿ ತನಿಖೆ ಮಾಡಲು ಸಾಧ್ಯ? ಇದರಿಂದ ಮುಕ್ತ ತನಿಖೆ ನಡೆಯದು. ಹಣ ವಾಪಾಸ್ ಬರುವುದೂ ಇಲ್ಲ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ 10 ಕೋಟಿಗಿಂತ ಹೆಚ್ಚು ಹಣ ಅವ್ಯವಹಾರವಾಗಿದ್ದರೆ ಸಿಬಿಐಗೆ ವಹಿಸಬೇಕೆಂಬ ನಿಯಮವಿದೆ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here