ಕೊಪ್ಪಳ: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ. ಕಲ್ಲೇಶ್ ಗೆ ಸಂಬಂಧಿಸಿದ ಮನೆ ಸೇರಿದಂತೆ ಆರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ 30ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಏಕಕಾಲದಲ್ಲಿ ದಾಳಿ ನಡೆಸಿದ್ದು, ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿರುವ ನವಚೇತನ ಪಿಯು ವಿಜ್ಞಾನ ಕಾಲೇಜು ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಹಾವೇರಿ, ರಾಯಚೂರು ಹಾಗೂ ಗದಗ ಜಿಲ್ಲೆಗಳಿಂದ ಏಳು ವಾಹನಗಳಲ್ಲಿ ಲೋಕಾಯುಕ್ತ ತಂಡ ಆಗಮಿಸಿ ದಾಳಿ ನಡೆಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ದಾಳಿಯ ವೇಳೆ ಹಣಕಾಸು ದಾಖಲೆಗಳು ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿದ್ದ ಬಿ. ಕಲ್ಲೇಶ್, ತನಿಖೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ತಮ್ಮ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸೇರಿ ಹಲವು ಆರೋಪಗಳ ಹಿನ್ನೆಲೆ ಈ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ಮತ್ತು ಪರಿಶೀಲನೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.



