ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿ, ಧರ್ಮ, ಸಮಾಜ, ಜೀವನ ಮೌಲ್ಯಗಳ ಹಿರಿಮೆಯನ್ನು ‘ರಾಮಾಯಣ’ ಕಾವ್ಯದ ಮೂಲಕ ಜಗತ್ತಿಗೆ ಪರಿಚಯಿಸಿರುವ ಮಹರ್ಷಿ ವಾಲ್ಮೀಕಿ ಸಾರ್ವಕಾಲಿಕ ಸಂತರಾಗಿದ್ದು, ಮಾನವರು ಸತ್ಯ, ಧರ್ಮ, ತ್ಯಾಗ, ಕರುಣೆ, ಸಹಾನುಭೂತಿ ಇತ್ಯಾದಿ ಆದರ್ಶಗಳನ್ನು ಕಾವ್ಯದಲ್ಲಿ ವಿವಿಧ ಪಾತ್ರಗಳ ಮೂಲಕ ಚಿತ್ರಿಸಿರುವ ಅವರ ಬರವಣಿಗೆ ಕಲೆ ಇಂದಿಗೂ ಆದರ್ಶವಾಗಿದೆ ಎಂದು ಪ್ರೊ. ಸುಧಾ ಕೌಜಗೇರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತ್ಯ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು, ವಿಚಾರಗಳು, ಸಂದೇಶಗಳು ಇಂದು ತುಂಬಾ ಪ್ರಸ್ತುತವಾಗಿವೆಯೆಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕ ಮತ್ತು ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ರಾಮಾಯಣ ಮಹಾಕಾವ್ಯದ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸುತ್ತ, ಪಾಶ್ಚಾತ್ಯ ಸಂಸ್ಕೃತಿ, ವಿಚಾರ, ಸಿದ್ಧಾಂತ, ವಾದಗಳ ಪ್ರಭಾವದಿಂದ ಕುಲುಷಿತವಾಗುತ್ತಿರುವ ಮನಸ್ಸುಗಳಿಗೆ ಈ ಮಹಾಕಾವ್ಯದ ಓದು ಅಗತ್ಯವಾಗಿದೆ ಎಂದು ಹೇಳಿದರು. ಕನ್ನಡ ಪ್ರಾಧ್ಯಾಪಕ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ರಾಮಾಯಣ ಮಹಾಕಾವ್ಯದ ಭಾಷೆ, ಸಾಹಿತ್ಯದ ಕುರಿತು ಮಾತನಾಡಿದರು.
ಉಮೇಶ್ ಹುಯಿಲಗೋಳ ಪೂಜೆ ನೆರವೇರಿಸಿದರು. ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಆಂತರಿಕ ಪರೀಕ್ಷಾ ಸಂಚಾಲಕ ಪ್ರೊ. ಲಕ್ಷ್ಮಣ ಮುಳಗುಂದ ನಿರೂಪಿಸಿದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಮತ್ತು ಕ್ರೀಡಾ ಸಂಚಾಲಕ ಮಹಾಂತೇಶ ವಂದಿಸಿದರು.