ಬೆಂಗಳೂರು: ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ವಾದ–ಪ್ರತಿವಾದ ಆಲಿಸಿ ಇಂದು ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ವಿಚಾರಣೆ ವೇಳೆ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದ ಮಂಡಿಸಿ, ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರ ಕುರಿತು ಸಿಐಡಿ ಮತ್ತು ಇಡಿ ತನಿಖೆ ನಡೆಸಿದ್ದು, ಮುಂದಿನ ಹಂತದಲ್ಲಿ ಫಲಾನುಭವಿಗಳ ಪತ್ತೆ ಅಗತ್ಯವಿದೆ ಎಂದು ತಿಳಿಸಿದರು. ಮುಂಬೈನಲ್ಲಿ ದಾಳಿ ನಡೆಸಿ ಮಾಹಿತಿ ಕಲೆಹಾಕಲಾಗಿದೆ; ಹಗರಣದ ಹಣವನ್ನು ಚಿನ್ನ ಮತ್ತು ಬುಲಿಯನ್ ಆಗಿ ಪರಿವರ್ತಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಾಗೇಂದ್ರ ಹಾಗೂ ಅವರ ಸಹಚರರ ಪಾತ್ರವಿದ್ದು, ಕೆಲ ಬೋಗಸ್ ಕಂಪನಿಗಳೂ ಭಾಗಿಯಾಗಿವೆ ಎಂದು ತನಿಖಾಧಿಕಾರಿ ಹೇಳಿ, ಸಾಕ್ಷ್ಯಾಧಾರಗಳಿರುವ ಎರಡು ಸೂಟ್‌ಕೇಸ್ ದಾಖಲೆಗಳನ್ನು ಕೋರ್ಟ್‌ಗೆ ಪ್ರದರ್ಶಿಸಿದರು.
ಇದಕ್ಕೆ ಪ್ರತಿಯಾಗಿ ನಾಗೇಂದ್ರ ಪರ ವಕೀಲರು, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರವು ವೈಯಕ್ತಿಕವಾದದ್ದು; ಸಿಬಿಐ ಉಲ್ಲೇಖಿಸುತ್ತಿರುವ ಟೆಂಡರ್ ಪ್ರಕ್ರಿಯೆಗೆ ಈ ವ್ಯವಹಾರಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿದರು. ಇದೀಗ ಕೋರ್ಟ್ ಮಾಜಿ ಸಚಿವ ನಾಗೇಂದ್ರ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.



