ಬೆಂಗಳೂರು: ಭೂಮಿಯ ಒಳಗೆ ಯಾವುದೇ ಬೆಲೆಬಾಳುವ ಅಥವಾ ಮೌಲ್ಯಯುತ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿಯಾಗುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಹೆಚ್.ಕೆ. ಪಾಟೀಲ್ (HK Patil) ಸ್ಪಷ್ಟಪಡಿಸಿದ್ದಾರೆ.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದೆ ಎನ್ನಲಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಕುಟುಂಬದ ಪ್ರಾಮಾಣಿಕತೆಯನ್ನು ಗೌರವಿಸುತ್ತೇವೆ. ಆದರೆ ಅದು ನಿಧಿಯಲ್ಲ, ಕುಟುಂಬದ ಬಂಗಾರ ಎಂಬಂತೆ ಅನಗತ್ಯ ಗೊಂದಲ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು. ಈ ಗೊಂದಲಕ್ಕೆ ಅಲ್ಲಿನ ಎಎಸ್ಐ ಅಧಿಕಾರಿ ಕಾರಣರಾಗಿದ್ದಾರೆ ಎಂದು ಆರೋಪಿಸಿದ ಸಚಿವರು, ಅನಗತ್ಯ ಗೊಂದಲ ಸೃಷ್ಟಿಸಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಭೂಮಿಯೊಳಗೆ ಸಿಕ್ಕ ಯಾವುದೇ ಮೌಲ್ಯಯುತ ವಸ್ತುಗಳು ಸರ್ಕಾರಕ್ಕೆ ಸೇರಿದ್ದೇ ಆಗುತ್ತದೆ. ಸದ್ಯ ಆ ಬಂಗಾರವನ್ನು ಜಿಲ್ಲಾ ಆಡಳಿತ ಖಜಾನೆಯಲ್ಲಿ ಸುರಕ್ಷಿತವಾಗಿ ಭದ್ರಪಡಿಸಿದೆ ಎಂದು ತಿಳಿಸಿದರು.
ಇದು ಆ ಕುಟುಂಬಕ್ಕೆ ಸೇರಿದ್ದೇ ಅಥವಾ ಆ ಜಾಗದ ಮೂಲ ಮಾಲೀಕರಿಗೆ ಸೇರಿದದ್ದೇ? ರಾಷ್ಟ್ರಕೂಟರ ಕಾಲದದೋ, ಚಾಲುಕ್ಯರ ಕಾಲದ ಐತಿಹಾಸಿಕ ವಸ್ತುವೋ ಎಂಬ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.



