ವಿಜಯಸಾಕ್ಷಿ ಸುದ್ದಿ, ಆಲ್ದೂರು : ಬದುಕು ವಿಕಾಸಗೊಳ್ಳಲು ಆಧ್ಯಾತ್ಮ ಜ್ಞಾನ ಬೇಕು. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ಸ್ವಾರ್ಥ ರಹಿತ ಬದುಕಿಗೆ ಬೆಲೆ, ಬಲ ಇದೆ. ಮೌಲ್ಯಾಧಾರಿತ ಪರಿಪಾಲನೆಯಿಂದ ಮಾನವ ಜೀವನಕ್ಕೆ ಬೆಲೆ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ ಸಂಯೋಜಿಸಿದ ಮಂಡಲ ಪೂಜಾ ಸಮಾರೋಪ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು. ನಮ್ಮ ಆಚರಣೆಯಂತೆ ಫಲ ಪ್ರಾಪ್ತವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯಲಾರದಿರುವುದೇ ಹಲವಾರು ಸಮಸ್ಯೆಗಳಿಗೆ ಕಾರಣ. ಶಾಂತಿ-ನೆಮ್ಮದಿಗಾಗಿ, ಸಂತೃಪ್ತಿ-ಸಮೃದ್ಧಿಗಾಗಿ ಧರ್ಮಾಚರಣೆ ಬಹಳ ಅವಶ್ಯಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ. ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು ಎಂದರು.
ಸಮ್ಮುಖ ವಹಿಸಿದ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಶಿಕ್ಷಣವಿಲ್ಲದೇ ಬದುಕಬಹುದು. ಆದರೆ ಸಂಸ್ಕಾರ-ಸಂಸ್ಕೃತಿ ಇಲ್ಲದೇ ಬಾಳಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಾದಿ ಶರಣರು ಜೀವನ ದರ್ಶನದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯ ಕ್ಷೇತ್ರಗಳು ಸ್ಫೂರ್ತಿ ಮತ್ತು ಚೈತನ್ಯ ನೀಡುವ ಕೇಂದ್ರಗಳಾಗಿವೆ. ಮಾನವನ ಉನ್ನತಿಗೆ ಧರ್ಮ ತಳಹದಿಯಾಗಿದೆ. ಪೂರ್ವಜರ ಅನುಭವದ ನುಡಿಗಳು ಬೆಳೆಯುವ ಜನಾಂಗಕ್ಕೆ ಆಶಾಕಿರಣ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನವೆಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಗ್ರಾ.ಪಂ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಸುರೇಶ ಮಾತನಾಡಿದರು.
ಶ್ರೀ ಮಹಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ರವಿ ಹೆಚ್.ಎಲ್., ಖಜಾಂಚಿ ಬಿ.ಎಸ್. ರಾಜೀವ, ಸಂಘಟನಾ ಕಾರ್ಯದರ್ಶಿ ಡಿ.ಸಿ. ಗಿರೀಶ ಮೊದಲ್ಗೊಂಡು ಅನೇಕ ಗಣ್ಯರು, ದಾನಿಗಳು ಪಾಲ್ಗೊಂಡಿದ್ದರು. ಎಚ್.ಎಲ್. ರವಿಕುಮಾರ ಸ್ವಾಗತಿಸಿದರು. ಮಹಿಳಾ ಭಜನಾ ಮಂಡಳಿಯಿಂದ ಪ್ರಾರ್ಥನಾ ಗೀತೆ ಜರುಗಿತು. ತನುಜಾ ರಾಜೇಶ ಮತ್ತು ಡಿ.ಸಿ. ಗಿರೀಶ ನಿರೂಪಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ವಿ.ಪ ಸದಸ್ಯ ಸಿ.ಟಿ. ರವಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಂಡ ನಾಡು ಭಾರತ. ಸಾಮರಸ್ಯ-ಸೌಹಾರ್ದತೆಯಿಂದ ಬದುಕಿ ಬಾಳುವುದೇ ಪ್ರತಿಯೊಬ್ಬರ ಧರ್ಮ. ವೃತ್ತಿ ಆಧರಿಸಿ ಜಾತಿಗಳು ನಿರ್ಮಾಣಗೊಂಡಿವೆ. ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ಕೊಡಬೇಕಾಗಿದೆ. ವಿಶ್ವದ ದಾರ್ಶನಿಕರು ವಿಶಾಲ ಮನೋಭಾವನೆಯಿಂದ ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ್ದಾರೆ ಎಂದರು.