ವರವಿ ಕ್ಷೇತ್ರ ಪ್ರವಾಸಿ ತಾಣವಾಗಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಕ್ಷೇತ್ರವು ಧಾರ್ಮಿಕ ಪ್ರವಾಸಿ ತಾಣವಾಗಿ ಮಾರ್ಪಡಬೇಕು. ಆ ನಿಟ್ಟಿನಲ್ಲಿ ಇಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಮೂರು ಕೋಟಿ ರೂಗಳ ಅನುದಾನವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

Advertisement

ಅವರು ವರವಿ ಕ್ಷೇತ್ರದಲ್ಲಿ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ವಿಶ್ವಕರ್ಮ ಮಹಾ ಒಕ್ಕೂಟ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶ್ವಕರ್ಮರು ಕಲಾ ನೈಪುಣ್ಯತೆಯ ಹರಿಕಾರರು. ಕಲೆ-ಸಂಸ್ಕೃತಿಯ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ. ಇಂಥ ಸಮುದಾಯದಲ್ಲಿ ಜನಿಸಿದ ಮೌನೇಶ್ವರರು ಈ ಕ್ಷೇತ್ರದಲ್ಲಿ ತಪಗೈದು ಈ ಗ್ರಾಮವನ್ನು ಪಾವನಗೊಳಿಸಿದ್ದಾರೆ. ಈ ಪುಣ್ಯ ಕ್ಷೇತ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಅದಕ್ಕೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದರು.

ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಪತ್ತಾರ ಮಾತನಾಡಿ, ಬಜೆಟ್‌ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ 42 ಕೋಟಿ ರೂಗಳ ಅನುದಾನದಲ್ಲಿ ವರವಿ ಕ್ಷೇತ್ರದ ಅಭಿವೃದ್ಧಿಗೆ ಅಧಿಕ ಮೊತ್ತವನ್ನು ಮಂಜೂರು ಮಾಡಬೇಕು. ಜೊತೆಗೆ ವಿಶ್ವಕರ್ಮ ಸಮುದಾಯದ ಶಕ್ತಿ ಕೇಂದ್ರಗಳಾದ ಶಿರಸಂಗಿ, ತಿಂಥಣಿ ಹಾಗೂ ಲಿಂಗನಬAಡಿ ಕ್ಷೇತ್ರಗಳ ಅಭಿವೃದ್ಧಿಯತ್ತ ಸರ್ಕಾರ ಗಮನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಗಣ್ಯರಾದ ಪಿ.ವಿ. ಕಪ್ಪತ್ತನವರ, ಹುಮಾಯೂನ ಮಾಗಡಿ, ಸುಜಾತಾ ದೊಡ್ಡಮನಿ, ಅಪ್ಪಣ್ಣ ಇನಾಮತಿ, ಗಿರೀಶ ಎಂ.ಡಬಾಲಿ, ನಿರಂಜನ ಬಡಿಗೇರ, ಚಂದ್ರಕಾಂತ ಸೋನಾರ, ದೇವೇಂದ್ರಪ್ಪ ಬಡಿಗೇರ, ಮುತ್ತಣ್ಣ ಬಡಿಗೇರ, ಪಿ.ವಿ. ಬಡಿಗೇರ ಉಪಸ್ಥಿತರಿದ್ದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಸ್ವಾಗತಿಸಿದರು. ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರವಿ ಮೌನೇಶ್ವರ ಮಠದ ಕಮಿಟಿಯ ಅಧ್ಯಕ್ಷ ಮೋಹನ್ ನರಗುಂದ ಪ್ರಾಸ್ತಾವಿಕ ನುಡಿಗಳನ್ನಾಡಿ, ವರವಿ ಕ್ಷೇತ್ರಕ್ಕೆ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯಾದಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಪ್ರಮುಖ ಆದ್ಯತೆ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here