ಗ್ರಾಮ ಸಭೆಯಲ್ಲಿ ಬಹುವಿಧ ಚರ್ಚೆ

0
Various discussions in the village meeting
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಗ್ರಾಮದ ಶೈಕ್ಷಣಿಕ ಪರಿಸರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅನೈತಿಕ ಚಟುವಟಿಕೆಯ ತಾಣಗಳಾಗಿದ್ದು, ಅವುಗಳ ಬಗ್ಗೆ ಗ್ರಾಮ ಪಂಚಾಯಿತಿಯು ಕ್ರಮ ಜರುಗಿಸಿ ಗ್ರಾಮದ ಹಿತ ಕಾಪಾಡಬೇಕೆಂದು ಬುಧವಾರ ನಡೆದ ಗ್ರಾಮ ಸಭೆಯಲ್ಲಿ ಒತ್ತಾಯಿಸಲಾಯಿತು.

Advertisement

ಕಳೆದ ಹಲವು ದಿನಗಳಿಂದ ಶಿಥಿಲಗೊಂಡು ಖಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಅಪ್ರಾಪ್ತರಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಈ ಬಗ್ಗೆ ವೈಧ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ನಾಗಮ್ಮ ಹಾಲಿನವರ ದೂರಿದರು. ಬಿ.ಎಚ್. ಪಾಟೀಲ ಕಾಲೇಜ್, ಸರಕಾರಿ ಶಾಲೆ ಮೈದಾನಗಳಲ್ಲಿ ರಾತ್ರಿ 8ರಿಂದ 10ರವರೆಗೆ ಗ್ರಾಮದ ಪ್ರಭಾವಿ ವ್ಯಕ್ತಿಗಳೇ ಮದ್ಯಪಾನ, ಧೂಮಪಾನ ಮಾಡಿ ಶೈಕ್ಷಣಿಕ ಪರಿಸರವನ್ನು ಹಾಳು ಮಾಡುತ್ತಿದ್ದು, ಪ್ರತಿದಿನ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕೆಂದು ಬಸವರಾಜ ಮುಳ್ಳಾಳ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಮನರೆಗಾ ಕಾಮಗಾರಿ ಕ್ರಿಯಾ ಯೋಜನೆಯನ್ನು ಜಮೀನು, ಹಳ್ಳ-ಕೊಳ್ಳಗಳಿಗೆ ರೂಪಿಸುವ ಬದಲು ಗ್ರಾಮದ ಶಾಲೆ, ಕಾಲೇಜು, ಕೆರೆಗಳ ಸುತ್ತಮುತ್ತಲಿನ ಪರಿಸರ ಅಭಿವೃದ್ಧಿಗೆ ವಿನಿಯೋಗಿಸಿ ಎಂದು ಮಂಜುನಾಥ ತಡಹಾಳ ಆಗ್ರಹಿಸಿದರು. ತುಂಗಾಭದ್ರಾ ನದಿಯಿಂದ ಗ್ರಾಮದ ಹಾಲಗೊಂಡ ಬಸವೇಶ್ವರ ಕೆರೆ, ದಂಡಿನ ದುರ್ಗಾದೇವಿ ಕೆರೆಯ ತುಂಬಿಸಲು ಗ್ರಾ.ಪಂ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಬೇಕು ಎಂದು ರೈತ ಮುಖಂಡ ವೆಂಕಟೇಶ ದೊಂಗಡೆ ಇತರರು ಆಗ್ರಹಿಸಿದರು.

ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇವೆ ನೀಡಲು ಬಂದಿದ್ದ ಅಂಬ್ಯುಲೆನ್ಸ್ ವಾಹನವು ಗದಗ ಜಿಮ್ಸ್ನಲ್ಲಿ ಕಳೆದ 6 ತಿಂಗಳಿಂದ ಸೇವೆ ನೀಡುತ್ತಿದೆ. ಇದರಿಂದ ಇಲ್ಲಿಯ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗ್ರಾ.ಪಂ ಕ್ರಮ ಜರುಗಿಸಬೇಕು ಎಂದು ಮರಿಯಪ್ಪ ವಡ್ಡರ ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಬ್ಬಂದಿ ವರ್ಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಬರುವ ಮತ್ತು ಹೋಗುವ ಸಮಯ ಗೊತ್ತಾಗುತ್ತಿಲ್ಲ.

ವೈದ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಗ್ರಾ.ಪಂ ಸದಸ್ಯ ಲಕ್ಷ್ಮಣ ಗುಡಸಲಮನಿ ದೂರಿದರು.
7 ಎಕರೆ ನಿವೇಶನದಲ್ಲಿ ಮೂಲಭೂತ ಸೌಲಭ್ಯ ಒದಗಿಸುವುದು, ಅರ್ಹರಿಗೆ ನಿವೇಶನ ಕೊಡುವುದು, ಸಮರ್ಪಕ ಕುಡಿಯುವ ನೀರು ಪೂರೈಸುವುದು, ಮಾರಾಟ ಮಳಿಗೆ ಟೆಂಡರ್ ಮಾಡುವುದು, ಒತ್ತುವರಿಯಾದ ಗ್ರಾ.ಪಂ ಜಾಗವನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಇತರ ವಿಷಯಗಳನ್ನು ಚರ್ಚಿಸಲಾಯಿತು. ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಪಂಚಾಯತಿಗೆ ಪೂರ್ಣ ಪ್ರಮಾಣದ ಅಧಿಕಾರಿಗಳನ್ನು ನೇಮಿಸಬೇಕೆಂದು ಗ್ರಾ.ಪಂ ಸದಸ್ಯ ಕುಬೇರಪ್ಪ ಬೆಂತೂರು ಆಗ್ರಹಿಸಿದರು.

ಕಾರ್ಯದರ್ಶಿ ಪ್ರದೀಪ ಆಲೂರು ಮಾತನಾಡಿ, 7 ಎಕರೆ ನಿವೇಶನದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಇನ್ನು ಮುಂದೆ ಗ್ರಾ.ಪಂ ಕಾರ್ಯಾಲಯದಲ್ಲಿಯೇ ಇ-ಸ್ವತ್ತು ಉತಾರ ಲಭ್ಯವಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೈಧ್ಯಾಧಿಕಾರಿ ಅಮೃತ ಹರಿದಾಸ, ರೈತ ಸಂಪರ್ಕ ಅಧಿಕಾರಿ ಈರಣ್ಣ ಗಡಾದ, ಅಂಗನವಾಡಿ ಮೇಲ್ವಿಚಾರಕಿ ಶಾಹಿಧ ಬೇಗಂ ಹತ್ತಿವಾಲೆ ಮಾತನಾಡಿದರು. ಗ್ರಾ.ಪಂ.ನ ಸ್ವಚ್ಚತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರು., ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ, ನೊಡೆಲ್ ಅಧಿಕಾರಿ ಮನೇರೆಗಾ ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಶಾಲಾ ಮುಖ್ಯೋಪಾಧ್ಯಯರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಡಿ.ಎ ತುಕಾರಾಮ ಹುಲಗಣ್ಣವರ ಸ್ವಾಗತಿಸಿ ವಂದಿಸಿದರು.

ಪ್ಲಾಸ್ಟಿಕ್‌ಗೆ ಬದಲಾಗಿ ಸಕ್ಕರೆ!

ಪ್ಲಾಸ್ಟಿಕ್ ಮುಕ್ತ ಗ್ರಾಮವಾಗಲು ಸಾರ್ವಜನಿಕರು 1 ಕೆ.ಜಿ ಪ್ಲಾಸ್ಟಿಕ್ ಸಂಗ್ರಹಿಸಿ ಕೊಟ್ಟರೆ 1 ಕೆ.ಜಿ ಸಕ್ಕರೆಯನ್ನು ಕೊಡುಗೆ ನೀಡಲಾಗುವುದು. ಗ್ರಾಮದಲ್ಲಿ ಪ್ರಮುಖವಾಗಿ ಕುಡಿವ ನೀರು ಪೂರೈಕೆ ಮಾಡಲು ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಕಸ ವಿಲೇವಾರಿ ಮಾಡಲು ಸಾರ್ವಜನಿಕರು ಹಸಿ ಮತ್ತು ಒಣ ಕಸ ಬೇರ್ಪಡಿಸಬೇಕು. ಶಾಲೆಗಳಿಗೆ ಕುಡಿಯುವ ನೀರು, ಶಾಲಾ ಮಕ್ಕಳಿಗೆ ಸಮರ್ಪಕ ಬಸ್ ವ್ಯವಸ್ಥೆ ಮತ್ತು ಆರೋಗ್ಯ ಕೇಂದ್ರಗಳ ಪರಿಸರ ಸ್ವಚ್ಛತೆಗೆ ಕ್ರಮ ಜರುಗಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.


Spread the love

LEAVE A REPLY

Please enter your comment!
Please enter your name here