ಬೆಂಗಳೂರು:- ಕರ್ನಾಟಕದ ಹಲವೆಡೆ ಇಂದು ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಯಾದಗಿರಿ,ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ವಿಜಯನಗರ, ಉಡುಪಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಡಗು, ಹಾಸನ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗದಗದಲ್ಲಿ ಮಳೆ ಅವಾಂತರ:-
ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ.
ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ನಾಲ್ಕಕ್ಕೂ ಹೆಚ್ಚು ಮನೆಗಳ ಮೇಲಿನ ತಗಡಿನ ಶೀಟ್‌ಗಳು ಹಾರಿ ಹೋಗಿ ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗಿದೆ. ಶೀಟ್‌ಗಳು ಹಾರಿದ ಪರಿಣಾಮ ಶಿವಪ್ಪ ಲಮಾಣಿ ಕಾಲಿಗೆ ಗಾಯಗೊಂಡಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದ ಘಟನೆ ನಡೆದಿದೆ.



