ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿಯ ಬ್ಲಿಸ್ ಹೊಟೇಲ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಬೆಂಗಳೂರು ವತಿಯಿಂದ `ಉರ್ದು ಕಲ್ ಆಜ್ ಔರ್ ಕಲ್’ ಉರ್ದು ಎನ್.ಜಿ.ಓ.ಗಳ ಸಮಾವೇಶವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಇದರಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಎನ್.ಜಿ.ಓ. ಸದಸ್ಯರು, ಉರ್ದು ಕವಿಗಳು, ಸಾಹಿತಿಗಳು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಘೋಷವಾಕ್ಯವಾದ `ಇನ್‌ಕ್ಲಾಬ್ ಜಿಂದಾಬಾದ’ ಉರ್ದು ಭಾಷೆಯ ಕೊಡುಗೆಯಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾಬ ಶಾಕೀರ ಸನದಿ ಮಾತನಾಡಿ, ಉರ್ದು ಭಾಷೆಯ ವಿಶಾಲತೆ ಮತ್ತು ಮಧುರವಾದ ನುಡಿ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಭಾಷೆಯ ಸಮೃದ್ಧವಾದ ಸಾಹಿತ್ಯ ಮತ್ತು ಕಾವ್ಯ ಸಂಪದ್ ಗೀತೆ, ಗಜಲ್ ಇಂದಿಗೂ ಸಹಜನಪ್ರಿಯವಾಗಿವೆ ಎಂದು ಹೇಳಿದರು.
ಉರ್ದು ಅಕಾಡೆಮಿಯ ರಜಿಸ್ಟಾರ್ ಜನಾಬ ಡಾ. ಮಆಜುದ್ದೀನಖಾನ್ ಮಾತನಾಡಿ, ಉರ್ದು ಭಾಷೆಯ ಮಾಧ್ಯಮದಿಂದ ಕನ್ನಡ ನಾಡಿನಲ್ಲಿ ಪರಸ್ಪರ ಸಹೋದರತೆ ಮತ್ತು ಸಾಮರಸ್ಯವನ್ನು ಬೆಳೆಸಬಹುದು, ಒಂದಾಗಿ ಬಾಳಬಹುದು. ಉರ್ದು ಭಾಷೆ ಯಾವುದೇ ಒಂದು ಕೋಮಿಗೆ ಸೀಮಿತವಾದ ಭಾಷೆ ಅಲ್ಲ ಎಂದರು.
ಸಮಾವೇಶದಲ್ಲಿ ಪಾಲ್ಗೊಂಡ ಗದುಗಿನ ಹಿರಿಯ ಉರ್ದು ಕವಿ ಜನಾಬ ಖದೀರ ಅಹ್ಮದ ಖದೀರ, ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಮೌಲಾನ್ ಮಹಮ್ಮದಅಲಿ ಖಾಜಿ ಮಾತನಾಡಿದರು. ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಜನಾಬ್ ಅನೀಸ್ ಸಿದ್ದಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.