ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿ ವರ್ಷ ಅಕ್ಟೋಬರ್ 23ರಿಂದ 25ರವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ವೀರ ರಾಣಿ ಚನ್ನಮ್ಮರ ಸ್ಮರಣೆಯಲ್ಲಿ ಕಿತ್ತೂರು ಉತ್ಸವ ಆಚರಿಸಲಾಗುತ್ತದೆ.
ರಾಜ್ಯಾದ್ಯಂತ ಕಿತ್ತೂರು ಉತ್ಸವದ ಅಂಗವಾಗಿ ವೀರ ಜ್ಯೋತಿಯ ಮೆರವಣಿಗೆ ಸಂಚರಿಸುತ್ತಿದ್ದು, ಅಕ್ಟೋಬರ್ 12ರಂದು ಗದಗ ಜಿಲ್ಲೆಗೆ ವೀರ ಜ್ಯೋತಿ ಆಗಮಿಸಲಿದೆ.
ಅಕ್ಟೋಬರ್ 12ರಂದು ಬೆಳಿಗ್ಗೆ 10 ಗಂಟೆಗೆ ಗದಗ ನಗರದ ಚನ್ನಮ್ಮ ಸರ್ಕಲ್‌ನಲ್ಲಿ ಕಿತ್ತೂರು ಉತ್ಸವದ ಅಂಗವಾಗಿ ಆಗಮಿಸುವ ವೀರ ಜ್ಯೋತಿಗೆ ಜಿಲ್ಲಾಡಳಿತದಿಂದ ಸ್ವಾಗತಿಸಲಾಗುತ್ತಿದ್ದು, ನಂತರ ಲಕ್ಕುಂಡಿ, ಬನ್ನಿಕೊಪ್ಪ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ತೆರಳುವುದು.
ವೀರಜ್ಯೋತಿ ಸ್ವಾಗತಿಸುವ ಕಾರ್ಯಕ್ರಮಕ್ಕೆ ಕಿತ್ತೂರು ಚನ್ನಮ್ಮ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸುವ ಮೂಲಕ ಯಶಸ್ವಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.