ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ವೀರ ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪಿ.ಆರ್. ಕಿರಣಗಿ, ಚನ್ನಮ್ಮನವರು ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕಿಂತ ಪೂರ್ವದಲ್ಲಿಯೇ ಉತ್ತರ ಕರ್ನಾಟಕದಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹಚ್ಚಿದವರು ವೀರ ರಾಣಿ ಕಿತ್ತೂರ ಚನ್ನಮ್ಮಾಜಿ. ಒಂದು ಚಿಕ್ಕ ರಾಜ್ಯವಾಗಿದ್ದ ಕಿತ್ತೂರು ರಾಜ್ಯವು ಚನ್ನಮ್ಮನವರ ಮುಂದಾಳತ್ವದಲ್ಲಿ ಬಲಿಷ್ಠ ಬ್ರಿಟಿಷರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದರು. ಕಿತ್ತೂರ ಚನ್ನಮ್ಮಾಜಿರವರು ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಹೆಸರುವಾಸಿಯಾಗಿರುವ ವೀರ ಮಹಿಳೆಯಾಗಿದ್ದಾರೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಒಬ್ಬ ಮಹಿಳೆ ಒಂದು ರಾಜ್ಯದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದನ್ನು ಕಿತ್ತೂರ ಚನ್ನಮ್ಮನವರು ತೋರಿಸಿಕೊಟ್ಟಿದ್ದಾರೆ. ಸ್ವಾತಂತ್ರ‍್ಯ ಸೇನಾನಿಗಳು ತಮ್ಮ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದ್ದಾರೆ. ಸ್ವತಂತ್ರ ಭಾರತದ ಏಳಿಗೆಗಾಗಿ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ಪಿ.ವೈ. ನಾಯಕ, ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಪ್ರಸನ್ನಕುಮಾರ ಕೆ. ಬಾಲಾನಾಯಕ್, ಬಸವರಾಜ ಅಮ್ಮನ್ನವರ, ಬಿ.ಬೋರಯ್ಯ, ಮಾಲತಿ ಎಸ್.ಎಸ್, ಅಧಿಕಾರಿಗಳಾದ ಜಿ.ವಿಜಯಕುಮಾರ, ಶ್ರೀನಾಥ ಜಿ, ಎಂ.ಬಿ. ಕಪಲಿ, ಕೃಷ್ಣಾನಂದ ಭಟ್, ಹನುಮನಗೌಡ ಜಿ, ಎಂ.ಡಿ. ಸುಂಕದ ಮತ್ತು ಕೇಂದ್ರ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.