ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವೀರಶೈವ-ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಇವೆರಡರಲ್ಲಿ ದ್ವಂದ್ವ ಹುಟ್ಟು ಹಾಕುವ ಕೆಲಸ ಯಾರೂ ಮಾಡಬಾರದು. ವೀರಶೈವ ಸೈದ್ಧಾಂತಿಕ ಪದವಾಗಿದ್ದು, ಲಿಂಗಾಯತ ರೂಢಿಯಿಂದ ಬಂದಿರುವುದಾಗಿದೆ. ಆದ್ದರಿಂದ ಜನಗಣತಿ, ಜಾತಿ ಗಣತಿ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಎಂದು ಎಲ್ಲರೂ ಬರೆಸುವ ಅವಶ್ಯಕತೆ ಇದೆ. ಒಳಪಂಗಡದಲ್ಲಿ ಯಾವುದೇ ಜಾತಿ ಬರೆದರೂ ಅದು ವೀರಶೈವ ಲಿಂಗಾಯತ ಎಂದೇ ತಿಳಿಯಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯರ ಸಮಾವೇಶ ಹಾಗೂ ಜನಗಣತಿ, ಜಾತಿ ಗಣತಿ ಚಿಂತನ-ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ನಮಗೆ ನೆರಳು ಕೊಡುವ ಮರವನ್ನೇ ಕತ್ತರಿಸುವ, ನಿಂತ ನೆಲವನ್ನು ಬಗೆಯುವ ಕೆಲಸ ಕೆಲವರಿಂದ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶಾಮನೂರ ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಶಂಕರ್ ಬಿದರಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಂಬರುವ ಜಾತಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಮಹಾಸಭೆಯ ನಿರ್ಧಾರದಂತೆ ವೀರಶೈವ ಲಿಂಗಾಯತ ಎಂದೇ ಬರೆಯುವುದು ಸೂಕ್ತ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀಮದ್ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳ ಪ್ರಯತ್ನದಿಂದಾಗಿ ಇಂದು ನಾವೆಲ್ಲರೂ ಮುಕ್ತಿಮಂದಿರ ಕ್ಷೇತ್ರದಲ್ಲಿ ಸೇರಿದ್ದೇವೆ. ಪರಸ್ಪರ ಸಮಾಲೋಚಿಸಿ ಧರ್ಮದ ಕಾಲಂನಲ್ಲಿ ಹಿಂದೂ ಮತ್ತು ಪಂಗಡದಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ಒಳಜಾತಿಯಲ್ಲಿ ಅವರವರ ಉಪಜಾತಿ ಬಳಸಬಹುದು. ಈ ವಿಚಾರವನ್ನು ಮಹಾಸಭೆ ಎಲ್ಲರಿಗೂ ಮನವರಿಕೆಯಾಗುವಂತೆ ಪ್ರಚಾರ ಪಡಿಸುವುದು ಮುಖ್ಯವಾಗಿದೆ ಎಂದರು.
ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಭಗವತ್ಪಾದರು, ಕಾಶೀ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ, ಬಹು ಸಂಖ್ಯಾತರಾದ ವೀರಶೈವ ಲಿಂಗಾಯತ ಸಮುದಾಯ ಬಹಳಷ್ಟು ಸಂಕಷ್ಟದಲ್ಲಿದೆ. ಎಲ್ಲ ಒಳಪಂಗಡಗಳ ಜನರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ನಮ್ಮ ಮೂಲ ಧರ್ಮವನ್ನು ಬೆಳೆಸುವ ಅವಶ್ಯಕತೆ ಇದೆ. ಈಗಿನ ಸರಕಾರ ಕೂಡ ಮತ್ತಷ್ಟು ಈ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿರುವುದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದರು.
ಹಿರಿಯ ನ್ಯಾಯವಾದಿಗಳಾದ ಗಂಗಾಧರ್ ಗುರುಮಠ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಈಗಲಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರನ್ನು ಎಲ್ಲ ಮಠಾಧೀಶರನ್ನು ಒಂದೆಡೆ ಸೇರಿಸಿ ಜಾಗೃತಿ ಮಾಡುವ ಅವಶ್ಯಕತೆ ಇದೆ ಎಂದರು.
ಸಮಾರಂಭದಲ್ಲಿ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ಗಂಗಣ್ಣ ಮಹಾಂತ ಶೆಟ್ಟರ್, ಮಹಾಸಭೆ ಉಪಾಧ್ಯಕ್ಷ ಅಣಬೇರು ರಾಜಣ್ಣ, ದಾವಣಗೆರೆ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಉಳವಯ್ಯ, ಅಕ್ಕಿ ರಾಜು, ವಿನಾಯಕ ಬಸ್ ಮಾಲೀಕ ಹರೀಶ್, ವಾಗೀಶ್ ಸ್ವಾಮಿ, ಚಂಬಣ್ಣ ಬಾಳಿಕಾಯಿ, ಆನಂದ ಮೆಕ್ಕಿ, ಪ್ರಶಾಂತ್, ವೀರೇಶ್ ಮುಂತಾದವರಿದ್ದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಂಕಲ್ಪ ನುಡಿ ನುಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಗಣಿ ಮತ್ತು ಭೂ ವಿಜ್ಞಾನ ಖಾತೆ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಮುಂಬರುವ ಜೂನ್ ತಿಂಗಳಲ್ಲಿ ದಾವಣಗೆರೆ ಮಹಾನಗರದಲ್ಲಿ ಮತ್ತೊಮ್ಮೆ ಪಂಚಪೀಠಾಧೀಶ್ವರರನ್ನು ಬರಮಾಡಿಕೊಂಡು ಬೃಹತ್ ಸಮಾರಂಭ ಆಯೋಜಿಸುವ ಉದ್ದೇಶವನ್ನು ಹೊಂದಿದ್ದೇವೆ. ವೀರಶೈವ ಲಿಂಗಾಯಿತ ಸಮುದಾಯದ ಎಲ್ಲ ರಾಜಕೀಯ ನಾಯಕರು ಒಗ್ಗಟ್ಟಾಗಿ ಸರ್ಕಾರಕ್ಕೆ ಎಲ್ಲ ಒಳಪಂಗಡಗಳು ವೀರಶೈವ ಲಿಂಗಾಯತ ಸಮಾಜಕ್ಕೆ ಸಂಬಂಧಪಟ್ಟಿವೆ ಎಂದು ಮನವರಿಕೆ ಮಾಡಿಕೊಡಲಾಗುವುದೆಂದರು.


