ವಿಜಯಸಾಕ್ಷಿ ಸುದ್ದಿ, ಗದಗ: ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಜ. 29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ನಡೆಯಲಿದೆ ಎಂದು ಸಂಸ್ಥೆಯ ಹುಬ್ಬಳ್ಳಿ ವಲಯದ ಅಧ್ಯಕ್ಷ ಗುರು ಅಂಗಡಿ ಹೇಳಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಹಿಂದೆ ನಡೆದಿರುವ ಮೂರು ಉದ್ಯಮ ಸಮ್ಮೇಳನಗಳು ದೊಡ್ಡ ಯಶಸ್ಸು ಕಂಡಿದ್ದು, ನೂರಾರು ಕೋಟಿ ವಹಿವಾಟು ನಡೆಸಿವೆ. ಈ ಹಿನ್ನೆಲೆಯಲ್ಲಿ 4ನೇ ವರ್ಷದ ಸಮ್ಮೇಳನವನ್ನು ನಾಲ್ಕು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ ಎಂದರು.
2023ರಲ್ಲಿ ಆರಂಭಗೊಂಡ ಸಮ್ಮೇಳನವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಆಗ 35 ಕೋಟಿ ರೂ ಮೊತ್ತದ ವ್ಯವಹಾರ ಒಡಂಬಡಿಕೆಗಳು ನಡೆದಿದ್ದವು. 2024ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ 64 ಕೋಟಿ ರೂ, 2025ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ 135 ಕೋಟಿ ರೂ ವ್ಯವಹಾರ ನಡೆದಿತ್ತು ಎಂದು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ನಾಲ್ಕನೇ ಸಮ್ಮೇಳನದಲ್ಲಿ 75 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಈ ಪ್ರದೇಶದಲ್ಲಿನ ಅತಿದೊಡ್ಡ ಸಮುದಾಯ ನೇತೃತ್ವದ ಸಮ್ಮೇಳನ ಎಂಬ ದಾಖಲೆ ಬರೆಯಲಿದೆ ಎಂದರು.
ನಾಲ್ಕು ದಿನಗಳ ಸಮ್ಮೇಳನದಲ್ಲಿ ಉದ್ಯಮಿಗಳು, ಕೈಗಾರಿಕಾ ದಿಗ್ಗಜರು, ನೀತಿ ನಿರ್ಧಾರಕರು, ಸ್ಟಾರ್ಟ್ಅಪ್‌ಗಳು, ಎಂಎಸ್‌ಎಂಇಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. ಜ. 29ರಂದು ಸಂಜೆ 4.30ಕ್ಕೆ ಸಿದ್ಧಗಂಗಾ ಶ್ರೀಗಳು ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಫೆಬ್ರವರಿ 1ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಚಿಕ್ಕಮಗಳೂರಿನ ವಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಚಿವ ಡಾ. ಶರಣಪ್ರಕಾಶ್ ಪಾಟೀಲ, ವಿಜಯಾನಂದ ಕಾಶಪ್ಪನವರ, ಶಂಕರ್ ಬಿದರಿ, ಮುರುಗೇಶ ನಿರಾಣಿ, ರಾಣಿ ಸತೀಶ್, ಐಎಲ್‌ವೈಎಫ್ ಸಂಸ್ಥಾಪಕ ಟ್ರಸ್ಟಿ ನವೀನ್ ಕೆ.ಎಸ್. ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.



