ಉತ್ತರ ಕನ್ನಡ:– ರಾಮನಗರ- ಗೋವಾ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-4ಎ)ಯಲ್ಲಿ ಜೋಯಿಡಾ ತಾಲೂಕು ವ್ಯಾಪ್ತಿಯ ಹಲವು ಕಡೆಗಳಲ್ಲಿ ಮಳೆಯಿಂದ ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ವರೆಗೆ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ
ಕರಾವಳಿ ಭಾಗಗಳಾದ ಉಡುಪಿ, ಉತ್ತರ ಕನ್ನಡ ಸೇರಿದಂತೆ ವರುಣಾರ್ಭಟ ಜೋರಾಗಿದೆ. ಈ ಹಿನ್ನಲೆ ಮುಂಜಾಗೃತ ಕ್ರಮವಾಗಿ ಇಂದಿನಿಂದ ಸೆಪ್ಟೆಂಬರ್ 30 ರ ವರೆಗೆ ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ (Ramanagara – Goa National Highway) NH 4A ನಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಷೇಧ ಹೇರಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗ ಇಲ್ಲಿದೆ
ಮಳೆ ಹಾಗೂ ರಸ್ತೆ ಹದಗೆಟ್ಟಿದ್ದರಿಂದ ಇಂದು ರಸ್ತೆಯಲ್ಲಿ ನೀರು ನಿಂತು ವಾಹನಗಳು ಮುಳಗಿ ಅನಾಹುತದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಇನ್ನು ಬದಲಿ ಮಾರ್ಗಸೂಚಿ ಕೂಡ ಸೂಚಿಸಿದ್ದು, ‘ಧಾರವಾಡದಿಂದ ಸಂಚರಿಸುವ ವಾಹನಗಳಿಗೆ ಅಳ್ನಾವರ- ಹಳಿಯಾಳ- ಯಲ್ಲಾಪುರ ಕಾರವಾರ ದಿಂದ ಗೋವಾಕ್ಕೆ ಸಾಗಲು ಪರ್ಯಾಯ ಮಾರ್ಗ ಸೂಚಿಸಿದೆ. ಬೆಳಗಾವಿಯಿಂದ ಸಂಚರಿಸುವ ವಾಹನಗಳಿಗೆ ಚೋರ್ಲಾ ಘಾಟ್ ಮಾರ್ಗವಾಗಿ ಗೋವಾಕ್ಕೆ ತೆರಳಬಹುದಾಗಿದೆ.
ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಬೆಳಿಗ್ಗೆಯಿಂದ ಮಳೆ ಹೆಚ್ಚಾಗಿದ್ದು, ಅರಗಾ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇನ್ನು ಗುಡ್ಡದ ಪಕ್ಕದಲ್ಲೇ ಗ್ರಾಮವಿದ್ದು ಅಪಾರ ಪ್ರಮಾಣದಲ್ಲಿ ಗುಡ್ಡದ ಮೇಲಿನಿಂದ ನೀರು ಗ್ರಾಮದತ್ತ ಹರಿದು ಬಂದಿದೆ. ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿ ನೌಕಾನೆಲೆಯವರು ಕಾಂಪೌಂಡ್ಗಳನ್ನ ಹಾಕಿದ್ದು, ಇದರಿಂದ ನೀರು ಮುಂದೆ ಹೋಗದೇ ರಾಷ್ಟ್ರೀಯ ಹೆದ್ದಾರಿ 66ರ ಮೇಲೆಯೇ ನಿಂತಿದೆ. ಪರಿಣಾಮ ಸುಮಾರು ಒಂದು ಘಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ಥವ್ಯಸ್ಥವಾಗಿದ್ದು, ಪ್ರತಿ ಭಾರಿ ಎದುರಾಗುವ ಈ ಸಮಸ್ಯೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.