ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರು ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಸರೋಜಾದೇವಿ ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಇವರನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು ಎಂದು ಬರೆದುಕೊಂಡಿದ್ದಾರೆ.
ಮಾತ್ರವಲ್ಲದೇ ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟವಾಗಿದ್ದು, ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಬರೆದುಕೊಂಡಿದ್ದಾರೆ.