ಬಾಲಿವುಡ್ ನಟ ಶಾರುಖ್ ಖಾನ್ ಅವರು ಜವಾನ್ ಸಿನಿಮಾದ ನಟನೆಗಾಗಿ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮೊದಲ ಭಾರಿಗೆ ಶಾರುಖ್ ಖಾನ್ ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಶಾರುಖ್ ಖಾನ್ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಇದೀಗ ಶಾರುಖ್ ಖಾನ್ ಗೆ ಸಿಕ್ಕ ರಾಷ್ಟ್ರ ಪ್ರಶಸ್ತಿ ಬಗ್ಗೆ ಹಿರಿಯ ನಟಿ ಊರ್ವಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಊರ್ವಶಿ, ‘ವಿಜಯ ರಾಘವನ್ ಎಂಥ ಶ್ರೇಷ್ಠ ನಟ. ಶಾರುಖ್ ಖಾನ್ ಮತ್ತು ವಿಜಯ ರಾಘವನ್ ನಡುವೆ ಜೂರಿಗಳು ಏನನ್ನು ಪರಿಗಣಿಸಿದರು? ಒಬ್ಬರು ಪೋಷಕ ನಟನಾದರೆ, ಇನ್ನೊಬ್ಬರು ಅತ್ಯುತ್ತಮ ನಟ ಆಗಿದ್ದು ಹೇಗೆ? ಇದಕ್ಕೆ ಮಾನದಂಡಗಳೇನು’ ಎಂದು ಪ್ರಶ್ನಿಸಿದ್ದಾರೆ.
‘ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳಬೇಕು. ನಾವು ಕೂಡ ತೆರಿಗೆ ಕಟ್ಟುತ್ತೇವೆ. ವಿಜಯ ರಾಘವನ್ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವ ಇದೆ. ಅವರು ಮಾಡಿದ ಸಿನಿಮಾ ಬಿಗ್ ಬಜೆಟ್ನದ್ದಲ್ಲ. ಬೇರೆ ಭಾಷೆಯವರು ಮಾಡುವ ರೀತಿ 250 ದಿನ ಚಿತ್ರೀಕರಣ ಮಾಡುವಂಥದ್ದೂ ಅಲ್ಲ’ ಎಂದಿದ್ದಾರೆ ಊರ್ವಶಿ. ‘ಪೂಕಾಲಂ’ ಸಿನಿಮಾಕ್ಕಾಗಿ ವಿಜಯ ರಾಘವನ್ ಹಾಕಿದ ಶ್ರಮಕ್ಕೆ ಇನ್ನಷ್ಟು ಮನ್ನಣೆ ಸಿಗಬೇಕಿತ್ತು ಎಂದಿದ್ದಾರೆ.
ಮಲಯಾಳಂನ ‘ಪೂಕಾಲಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ವಿಜಯ ರಾಘವನ್ ಅವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದ್ದು, ‘ಉಳ್ಳೋಳುಕ್ಕು’ ಸಿನಿಮಾದ ನಟನೆಗಾಗಿ ಊರ್ವಶಿ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.