ವಿಜಯಸಾಕ್ಷಿ ಸುದ್ದಿ, ಗದಗ : ಜಮ್ಮು-ಕಾಶ್ಮೀರದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಗದಗ ಜಿಲ್ಲಾ ಪದಾಧಿಕಾರಿಗಳು ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶ್ರೀಧರ ಕುಲಕರ್ಣಿ, ಜೂನ್ 9ರಂದು ಜಮ್ಮು-ಕಾಶ್ಮೀರದಲ್ಲಿ ವೈಷ್ಣೋದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಬಸ್ಸಿನ ಮೇಲೆ ಪಾಕಿಸ್ತಾನ ಪೋಷಿತ ಇಸ್ಲಾಮಿಕ್ ಜಿಹಾದಿಗಳು ಭಯೋತ್ಪಾದಕ ಕೃತ್ಯವನ್ನು ನಡೆಸಿದ್ದು, ಇದರಲ್ಲಿ 10 ನಿರ್ದೋಷಿ ಹಿಂದೂ ಯಾತ್ರಿಕರು ಮರಣ ಹೊಂದಿದ್ದಾರೆ. 40ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮ್ಮು-ಕಾಶ್ಮೀರವು ಪಾಕಿಸ್ತಾನ ಪೋಷಿತ ಭಯೋತ್ಪಾದನೆಯಿಂದ ಇನ್ನೂ ಮುಕ್ತವಾಗಿಲ್ಲ. 370ನೇ ವಿಧಿಯನ್ನು ರದ್ದುಪಡಿಸಿದ ನಂತರವೂ ಉಗ್ರರ ಅಟ್ಟಹಾಸ ಕಡಿಮೆಯಾಗಿಲ್ಲ. ಇದರಲ್ಲಿ ಪಾಕಿಸ್ತಾನದ ಹಸ್ತಕ್ಷೇಪ ಸ್ಪಷ್ಟವಾಗಿದೆ. ದೇಶದ ಹೊಸ ಸರ್ಕಾರದ ಪ್ರಮಾಣವಚನದ ಸಮಯದಲ್ಲಿ ಇಂತಹ ಹೇಯ ಕೃತ್ಯವನ್ನು ಮಾಡಿ ಇಸ್ಲಾಮಿಕ್ ಭಯೋತ್ಪಾದಕರು ದೇಶದ ಸ್ವಾಯತ್ತತೆಗೆ ಸವಾಲೆಸೆದಂತಾಗಿದೆ. ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷರಾದ ಮಾರುತಿ ಪವಾರ, ಮಾಜಿ ಅಧ್ಯಕ್ಷ ಪ್ರೊ. ಪಿ.ಆರ್. ಇನಾಮದಾರ, ಯುವ ಮುಖಂಡ ಸುಧೀರ ಕಾಟಿಗರ, ಅಂಗಡಿ ಇಂಜನಿಯರ್, ವಿಲಾಸ ಕೊಪ್ಪಳ ವಕೀಲರು, ಬಸವರಾಜ ಬೆಳವಟಗಿ, ಸಚಿನ ಸಾಬಳೆ, ಡಾ. ಗಣೇಶ ಸುಲ್ತಾನಪುರ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.