ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ರಾಜೀವ್ ಪಿಕಳೆ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ವಿಡಿಯೋ ವೈರಲ್ ಮಾಡಿದ ಆರೋಪದ ಮೇರೆಗೆ ಸುಭಾಷ್ ಮತ್ತು ಹರಿಶ್ಚಂದ್ರ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುಟುಂಬಕ್ಕೆ ಸೇರಿದ ರಾಜೀವ್ ಪಿಕಳೆ, ಸೋಶಿಯಲ್ ಮೀಡಿಯಾದ ತೇಜೋವಧೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೈರಲ್ ಆಗಿದ್ದ ವಿಡಿಯೋದಲ್ಲಿ, ಪಿಕಳೆ ರೋಗಿಗೆ ಅವಧಿ ಮೀರಿದ ಔಷಧ ನೀಡಿದ ವಿಚಾರ ಉಲ್ಲೇಖವಾಗಿತ್ತು.
ಈ ವಿಡಿಯೋ ವೈರಲ್ ಆದ ಬಳಿಕ ಪಿಕಳೆ ತೀವ್ರವಾಗಿ ನೊಂದಿದ್ದು, ಸಾರ್ವಜನಿಕವಾಗಿ ಕ್ಷಮೆಯನ್ನೂ ಕೇಳಿದ್ದರು. ಆದರೆ ಜಾಲತಾಣಗಳಲ್ಲಿ ನಿರಂತರ ಟೀಕೆ ಮತ್ತು ಅವಮಾನ ಮುಂದುವರಿದ ಕಾರಣ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆ ದಿನ ಪಿಕಳೆ ತಮ್ಮ ನಿವಾಸದಲ್ಲಿಯೇ ಡಬಲ್ ಬ್ಯಾರಲ್ ಗನ್ ಬಳಸಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟಿನಲ್ಲಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದ ದುರ್ಬಳಕೆ ಯಾವ ಮಟ್ಟಿಗೆ ಮಾನಸಿಕ ಹಾನಿ ಉಂಟು ಮಾಡಬಹುದು ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಗಂಭೀರ ಉದಾಹರಣೆಯಾಗಿದೆ.



