ಗದಗ:ಪ್ರಾಚೀನ ಕಾಲದಿಂದಲೂ ನ್ಯಾಯ, ನೀತಿ ಹಾಗೂ ಧರ್ಮಗಳು ಭಾರತೀಯ ಜನ-ಜೀವನದ ಸಾಮಾಜಿಕ, ಆರ್ಥಿಕ, ಧಾರ್ಮಿಕ ರಂಗಗಳ ಅವಿಭಾಜ್ಯಗಳಾಗಿವೆ. ನ್ಯಾಯಾಲಯದಲ್ಲಿ ನ್ಯಾಯದಾನ ಪ್ರಕ್ರಿಯೆಯಿಂದ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಬೆಂಗಳೂರನ ಕರ್ನಾಟಕ ಲಾ ರಿಪೋಟರ‍್ಸ್ ಪಬ್ಲಿಕೇಷನ್‌ನಿಂದ ಯುವ ನ್ಯಾಯವಾದಿ ಎಸ್.ಕೆ. ನದಾಫ್ ಅವರ ಸಂಪಾದಿತ `ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಯ ಪರಿಹರಿಸಿದ ಪ್ರಶ್ನೆ ಪತ್ರಿಕೆಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಯುವ ಉತ್ಸಾಹಿ ನ್ಯಾಯವಾದಿ ನದಾಫ್ ಅವರು ತಮ್ಮ ಕೃತಿಯಲ್ಲಿ 2013ರಿಂದ 2022ರ ಹೊಸ ಪಠ್ಯಕ್ರಮ ಕಾನೂನು ಪತ್ರಿಕೆ ಭಾಗ-1ರಿಂದ ಭಾಗ-3 ಮತ್ತು ಅನುವಾದ ಪತ್ರಿಕೆ 1800 ಪುಟಗಳ ಬೃಹತ್ ಸಂಪಾದಿತ ಕೃತಿ ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ.
ಇಂದಿನ ಸಂಘರ್ಷದ ಕಂದಕಗಳನ್ನು ಮುಚ್ಚಿ ಯಶಸ್ಸಿನ ಹಾದಿಯಲ್ಲಿ ಸಾಗಲು ಯುವ ನ್ಯಾಯವಾದಿಗಳಿಗೆ ಸಿವಿಲ್ ನ್ಯಾಯಾಧೀಶರ ಮುಖ್ಯ ಪರೀಕ್ಷೆಗಾಗಿ ಪೂರ್ವ ತಯಾರಿಕೆಗಾಗಿ ಈ ಪುಸ್ತಕ ಉತ್ತಮ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಲೇಖಕ, ನ್ಯಾಯವಾದಿ ಎಸ್.ಕೆ. ನದಾಫ್ ಮಾತನಾಡಿ, ಇಂದಿನ ದಿನಮಾನದಲ್ಲಿ ನಮ್ಮ ಯುವ ನ್ಯಾಯವಾದಿಗಳಿಗೆ ಕನ್ನಡದಲ್ಲಿ ಕಾನೂನು ಪುಸ್ತಕಗಳ ಅವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಾನು ನನ್ನ ಅನುಭವ ಹಾಗೂ ಅಧ್ಯಯನಶೀಲತೆಯಿಂದ ಈ ಪುಸ್ತಕ ಸಿದ್ಧಪಡಿಸಿದ್ದೇನೆ.
ಮುಖ್ಯವಾಗಿ ನನ್ನ ಮಾರ್ಗದರ್ಶಕರು ಹಾಗೂ ನಮ್ಮ ಮಾತೃ ಇಲಾಖೆಯ ಸಚಿವರಿಂದಲೇ ಈ ಪುಸ್ತಕ ಬಿಡುಗಡೆಯಾಗಿದ್ದು ನನ್ನ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಬೆಂಗಳೂರಿನ ಕರ್ನಾಟಕ ಲಾ ರಿಪೋರ್ಟ್, ಬಿಬಿಸಿ ಪ್ರಕಾಶನದ ಪ್ರಕಾಶಕ ವಿ.ತ್ಯಾಗರಾಜ್ ಹಾಗೂ ನ್ಯಾಯವಾದಿ ಕುಶವಂತ ಕುಮಾರ್ ಹಾಗೂ ನ್ಯಾಯವಾದಿಗಳಾದ ತುಳಸಿಗಿರಿ, ಬೆಳ್ಳೆಪ್ಪ, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ಲತೀಫ ಕುನ್ನಿಭಾವಿ ಮುಂತಾದವರು ಉಪಸ್ಥಿತರಿದ್ದರು.
ನ್ಯಾಯಾಧೀಶರಾಗಲು ಕನಸು ಕಾಣುತ್ತಿರುವ ನ್ಯಾಯವಾದಿ ಮಿತ್ರರು ತಪಸ್ಸಿನ ರೀತಿಯಲ್ಲಿ ಅಧ್ಯಯನಶೀಲರಾದಾಗ ಮಾತ್ರ ಗೆಲುವು ಲಭಿಸುತ್ತದೆ. ಪರೀಕ್ಷಾರ್ಥಿಗಳ ನಿಶ್ಚಿತ ಗುರಿ ಸಾಧನೆಗೆ ಈ ಪುಸ್ತಕ ಪ್ರಶ್ನೋತ್ತರ ಮಾಲಿಕೆಯ ಹೊತ್ತಿಗೆಯಾಗಿ ಗುರುವಿನ ಸ್ಥಾನದಲ್ಲಿ ಮಾರ್ಗದರ್ಶಿಯಾಗಬಲ್ಲದು. ಕಳೆದ ಒಂದು ದಶಕದಲ್ಲಿ ನ್ಯಾಯಾಧೀಶರ ಮತ್ತು ಅಭಿಯೋಜಕರ ಪರೀಕ್ಷೆಯಲ್ಲಿ ಭಾಗಶಃ ಅಭ್ಯರ್ಥಿಗಳು ಬಿ.ಬಿ.ಸಿ ಹಾಗೂ ಕೆ.ಎಲ್.ಆರ್ ಸೇರಿದಂತೆ ಇನ್ನಿತರ ಪ್ರಕಾಶನದ ಕಾನೂನು ಪುಸ್ತಕಗಳನ್ನು ಉಲ್ಲೇಖ ಮಾಡಿದ್ದನ್ನು ಸಚಿವರು ಸ್ಮರಿಸಿದರು.