ವಿಜಯನಗರ: ಲಾರಿ ಡಿಕ್ಕಿಯಾಗಿ ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಈಶ್ವರಪ್ಪ (55) ಹಾಗೂ ಸೃಷ್ಟಿ (14) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಕರ್ನಾರ್ಹಟ್ಟಿ ಗ್ರಾಮದ ಬಾಲಕಿ ಸೃಷ್ಟಿ ಕೂಡ್ಲಿಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಗುರುವಾರ ವಾರ್ಷಿಕ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬಾಲಕಿಯನ್ನು ಬೈಕ್ನಲ್ಲಿ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ಕ್ಯಾಸನಕೆರೆ ಸಮೀಪ ಬೈಕ್ ಸಾಗುತ್ತಿದ್ದಾಗ ಹೆದ್ದಾರಿಯಲ್ಲಿ ಒಣಹಾಕಿದ್ದ ರಾಗಿ ಕಣದ ಮೇಲೆ ಬೈಕ್ ಚಲಾಯಿಸಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಇದೇ ವೇಳೆ ಹಿಂದಿನಿಂದ ಬಂದ ಲಾರಿ ಇಬ್ಬರ ಮೇಲೂ ಹರಿದಿದೆ.
ಅಪಘಾತದ ಪರಿಣಾಮ ಅಜ್ಜ ಮತ್ತು ಮೊಮ್ಮಗಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



