ವಿಜಯನಗರ:- ಹುಬ್ಬಳ್ಳಿ ಮೂಲದ ಗುತ್ತಿಗೆದಾರನೋರ್ವ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಜರುಗಿದೆ.
ಆನಂದ ಉಮೇಶ್ ಹೆಗಡೆ (40) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ. ಭಾನುವಾರ ಬೆಳಗ್ಗೆ ಆನಂದ ಹೆಗಡೆ ಅವರು ಟೆಂಡರ್ ಸಂಬಂಧಿತ ಕೆಲಸಕ್ಕಾಗಿ ಹುಬ್ಬಳ್ಳಿಯಿಂದ ಹೂವಿನಹಡಗಲಿ ಪಟ್ಟಣಕ್ಕೆ ಆಗಮಿಸಿದ್ದರು. ದಾಕ್ಷಾಯಿಣಿ ಲಾಡ್ಜ್‌ನ 17ನೇ ಕೊಠಡಿಯ ತಂಗಿದ್ದ ಅವರು, ರಾತ್ರಿ ವೇಳೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ಆನಂದನ ಕುಟುಂಬದವರು ಸಾಕಷ್ಟು ಬಾರಿ ಅವರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಕಾರಣ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪರಿಶೀಲನೆಗೆಂದು ಕೊಠಡಿ ಬಾಗಿಲು ತೆರೆದಾಗ, ಕಿಟಕಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಸ್ಥಳಕ್ಕೆ ಹೂವಿನಹಡಗಲಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


