ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದ ಸಮೀಪದಲ್ಲಿರುವ ದತ್ತ ಸಕ್ಕರೆ ಕಾರ್ಖಾನೆಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಕಾರ್ಖಾನೆಯಲ್ಲಿ ಸಂಗ್ರಹಿಸಿದ್ದ ಬಗ್ಯಾಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳಿಗೂ ವ್ಯಾಪಿಸಿದೆ. ಅಗ್ನಿ ಅವಘಡದ ಪರಿಣಾಮ ಕಾರ್ಖಾನೆ ಆವರಣದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬೆಂಕಿಯ ತೀವ್ರತೆಯಿಂದ ಕೆಲವು ಯಂತ್ರೋಪಕರಣಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮುಂದುವರಿದಿದೆ. ಅದೃಷ್ಟವಶಾತ್ ಈ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದ್ದು, ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.



