ವಿಜಯಸಾಕ್ಷಿ ಸುದ್ದಿ, ಗದಗ
ಅಕ್ಕನ ಮಗಳ ಬರ್ಥ್ ಡೇ ಆಚರಣೆಗೆ ಬೈಕ್ ನಲ್ಲಿ ಹೊರಟಿದ್ದ ಇಬ್ಬರು ಯುವಕರು ಬೈಕ್ ಸಮೇತ ರಸ್ತೆಯ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ದುರ್ಘಟನೆ ನಿನ್ನೆ ರಾತ್ರಿ ಜರುಗಿದೆ.
ಗದಗ ತಾಲೂಕಿನ ನಾಗಾವಿ ಗ್ರಾಮದ ಬಳಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದ್ದು, ಲಕ್ಕುಂಡಿ ಗ್ರಾಮದ ಮಂಜುನಾಥ್ ಹಾಗೂ ಬಸವರಾಜ್ ಎಂಬ ಇಬ್ಬರೂ ಗೆಳೆಯರು ಯಲಿಶಿರುಂದ ಗ್ರಾಮಕ್ಕೆ ಅಕ್ಕನ ಮಗಳ ಬರ್ಥಡೇ ಆಚರಣೆ ಮಾಡಲು ಗದಗನಿಂದ ಕೇಕ್ ಖರೀದಿಸಿ ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಕಳೆದ 20ದಿನಗಳ ಹಿಂದೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು. ಆ ಸಂದರ್ಭದಲ್ಲಿ ನಾಗಾವಿ ಬಳಿ ಕೆರೆ ಕೋಡಿ ಒಡೆದು ರಸ್ತೆ ಕೊಚ್ಚಿಕೊಂಡು ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿತ್ತು.
ಸುಮಾರು 30 ಅಡಿಗೂ ಹೆಚ್ಚು ಕಂದಕ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ನಾಮಫಲಕ ಇದುವರೆಗೂ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೈಕ್ ಸವಾರರಿಗೆ ಗೊತ್ತಾಗದೇ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ.
ಮೃತ ಯುವಕರ ಕುಟುಂಬದವರ ಆಕ್ರಂಧನ ಮುಗಿಲ ಮುಟ್ಟಿದೆ.ಘಟನೆಯ ಮಾಹಿತಿ ತಿಳಿದ ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.