ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ; ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ವಿಚಾರಕ್ಕೆ ಈಗಾಗಲೇ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆದಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಗದಗ ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸರ್ಕಾರ ಮತ್ತೆ ಗಡುವು ಕೇಳಿದರೆ ನಾವು ಒಪ್ಪುವುದಿಲ್ಲ. ಇದುವರೆಗೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೆ ಕೂಡಾ ನಡೆಸುತ್ತಿಲ್ಲ. ಸರ್ಕಾರದ ಈ ನಡೆಗೆ ಪಂಚಮಸಾಲಿ ಸಮುದಾಯವು ಬೇಸತ್ತಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ ೨೫ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ ಸಿ ಪಾಟೀಲ್ ದಾರಿ ತಪ್ಪಿಸುವಂಥ ಕೆಲಸ ಮಾಡ್ತಿದ್ದಾರೆ. ಮೀಸಲಾತಿ ಕೊಟ್ಟರೆ ಪಂಚಮಸಾಲಿ ಜನಾಂಗಕ್ಕೆ ಉದ್ಯೋಗ, ಶಿಕ್ಷಣದಲ್ಲಿ ಅನುಕೂಲ ಆಗುತ್ತೆ. ಹಿಂದುಳಿದ ಸಮಾಜದವರಿಗೆ ಮೀಸಲಾತಿ ಕೇಳುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ. ಆದರೆ ಸರಕಾರ ಮೂಗಿಗೆ ತುಪ್ಪ ಒರೆಸೋ ಕೆಲಸವನ್ನು ಮಾಡುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶೇ ೫೦ ಒಳಗಾಗಿ ಮೀಸಲಾತಿ ಪಡೆಯಬಹುದು. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಮೀಸಲಾತಿ ವಿಚಾರ ರಾಜ್ಯ ಸರ್ಕಾರದ ಕೈಗೆ ಕೊಟ್ಟಿದೆ. ೨ಎ ಮೀಸಲಾತಿ ಅಷ್ಟೇ ಕೇಳಿದ್ದೇವೆಯೇ ಹೊರತು ಶೇ ೫೦ ಅಂತೂ ಅಲ್ಲ. ಈಗಾಗಲೇ ೨ಎ ಯಲ್ಲಿ ೧೦೮ ಪಂಗಡಗಳ ಒಳಪಡಿಸಲಾಗಿದೆ. ಅದರಲ್ಲಿ ನಮಗೂ ಒಂದು ಪಾಲು ಕೊಡಿ. ಪಂಚಮಸಾಲಿ ಸಮಾಜ ೩ಬಿ ಯಲ್ಲಿ ಇದೆ. ೨ಎ ಯಲ್ಲಿ ಶೇ ೧೫ ನೀಡುತ್ತಿದ್ದೀರಿ, ನಮ್ಮ ಸಮುದಾಯಕ್ಕೆ ಶೇ ೧೫ ನೀಡಿದರೆ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುತ್ತಾರೆ. ಅದಕ್ಕೆ ನಾವು ಮೀಸಲಾತಿ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಿ ಸಿ ಪಾಟೀಲರೇ, ಯಾಕೆ ದಾರಿ ತಪ್ಪಿಸುವಂತಹ ಕೆಲಸ ಮಾಡ್ತೀರಿ, ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೀವಿ, ಗೌರವ ಇಟ್ಟಿದ್ದೀವಿ. ಆ ಗೌರವ ಉಳಿಸಿಕೊಳ್ಳುವಂತಹ ಕೆಲಸ ಮಾಡಿ. ನೀವು ಮೀಸಲಾತಿ ಕೊಡಿಸುತ್ತೀರಿ ಎಂದು ಕಾಯುತ್ತಿದ್ದೇವೆ. ನಿಮ್ಮನ್ನು ಟಾರ್ಗೆಟ್ ಮಾಡ್ತಿದ್ದೀವಿ ಎಂದು ಹೇಳ್ತೀರಿ. ಮಾಡುವ ಕೆಲಸ ಸರಿಯಾಗಿ ಮಾಡಿದರೆ ನಾವು ಯಾಕೆ ಟಾರ್ಗೆಟ್ ಮಾಡೋಣ ಹೇಳಿ? ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ತೀವಿ, ತಪ್ಪೇನಿದೆ..? ನಾಚಿಕೆ ಆಗಬೇಕು ಸಾಮಾಜಿಕ ನ್ಯಾಯಕ್ಕೋಸ್ಕರ ಯಾವ ಮುಖ್ಯಮಂತ್ರಿ ಮನೆ ಮುಂದೂ ಧರಣಿ ನಡೆದಿರಲಿಲ್ಲ. ನೀವು ಒಬ್ಬ ಪೂಜ್ಯರನ್ನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂಡಿಸುವಂಥ ಕೆಲಸ ಮಾಡಿದ್ರಿ. ಇದು ಸರೀನಾ ಸಿ ಸಿ ಪಾಟೀಲರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಕುರ್ಚಿಗಾಗಿ ತಿರುಪತಿ ಭೇಟಿ

  • ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಿರುಪತಿಗೆ ಕರೆದುಕೊಂಡು ಹೋಗಿ ನಿಮ್ಮ ಕುರ್ಚಿ ಉಳಿಯಬೇಕಾದರೆ ಪಂಚಮಸಾಲಿಯವರಿಗೆ ೨ಎ ಮೀಸಲಾತಿ ಕೊಡಬಾರದು ಅಂತಾ ಪ್ರಮಾಣ ಮಾಡಿಸಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಆ ಕಾರಣಕ್ಕೆ ಯಡಿಯೂರಪ್ಪ ಮೇಲೆ ನಾವು ನೇರವಾದ ಆರೋಪ ಮಾಡ್ತಿದೀವಿ. ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಸಚಿವ ಸ್ಥಾನ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ೨ಎ ಮೀಸಲಾತಿ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ನಮ್ಮ ಮೀಸಲಾತಿಗೆ ಅಡ್ಡಿಯಾದವರು ಯಡಿಯೂರಪ್ಪ. ಸಮುದಾಯದ ಹೆಸರಲ್ಲಿ ನೀವು ಮಂತ್ರಿಗಿರಿ ತಗೋತೀರಿ. ಸಮದಾಯದ ಹೆಸರಲ್ಲಿ ಗೆದ್ದು ಬರ್ತೀರಿ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ನೀವು ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿದವರು ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಒಬ್ಬ ಮಂತ್ರಿ ಕಾನೂನು ಹೋರಾಟ ಮಾಡ್ತೀವಿ ಅಂತಾರೆ. ಅದಕ್ಕೆ ಪರೋಕ್ಷವಾಗಿ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಕಾರ್ಯದರ್ಶಿ ಸಂಗಮೇಶ ಕವಳಿಕಾಯಿ, ಸಮಾಜದ ಮುಖಂಡ ಸಿದ್ದು ಪಾಟೀಲ್ ಇದ್ದರು.


Spread the love

LEAVE A REPLY

Please enter your comment!
Please enter your name here