ವಿಜಯಸಾಕ್ಷಿ ಸುದ್ದಿ, ಗದಗ
ತನ್ನ ಸ್ವಂತ ಲಾಭಕ್ಕೋಸ್ಕರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಿಂದ ಶಿಂಗಟರಾಯನಕೆರೆ ತಾಂಡಾಕ್ಕೆ ಹೋಗುವ ಕಚ್ಚಾ ರಸ್ತೆಯ ಬಳಿಯಿರುವ ಸರ್ವೆ ನಂ. 212/2ರಲ್ಲಿ ಒಟ್ಟು 180 ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆಸಲಾಗಿತ್ತು.
21.10.2016 ರಂದು ಆರೋಪಿತ ಅಮರಪ್ಪ ಈಶ್ವರಪ್ಪ ಲಮಾಣಿ ಸಿಕ್ಕಿಬಿದ್ದಿದ್ದು, ಇವನಿಂದ ಸುಮಾರು 11 ಕೆಜಿ 900 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಗದಗ ಉಪವಿಭಾಗದ ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಎಸ್ ಶೆಟ್ಟಿ ಇವರು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಆಗಸ್ಟ್ 17ರಂದು ಶಿಕ್ಷೆ ವಿಧಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆಯ ಕಲಂ 20(ಎ)(ಬಿ) (2)(ಸಿ), 8(ಸಿ) ಅಡಿಯಲ್ಲಿ 2 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.