ಕೋಮು ರಾಜಕಾರಣಕ್ಕೆ ಬಲಿಯಾಗಿದ್ದ ನರಗುಂದದ ಸಮೀರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

0
Spread the love

ಒಟ್ಟು ಆರು ಕುಟುಂಬಗಳಿಗೆ ಪರಿಹಾರ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ……

Advertisement

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮತೀಯ ದ್ವೇಷದಿಂದ ಹತ್ಯೆಗೀಡಾದ ರಾಜ್ಯದ ಆರು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್ ನ ಮುಹಮ್ಮದ್ ಫಾಝಿಲ್, ಅಬ್ದುಲ್ ಜಲೀಲ್ , ದೀಪಕ್ ರಾವ್ , ಮಂಡ್ಯದ ಇದ್ರೀಸ್ ಪಾಶಾ, ನರಗುಂದದ ಸಮೀರ್ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಗದಗ ಜಿಲ್ಲೆಯ ನರಗುಂದ ಪಟ್ಟಣದ ಯುವಕ ಕೋಮು ದ್ವೇಷಕ್ಕೆ ಬಲಿಯಾಗಿದ್ದ ಸಮೀರ್ ಸುಬಾನಸಾಬ ಶಾಹಪೂರ ಕುಟುಂಬದ ಸದಸ್ಯರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 25 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
ಸರ್ಕಾರ ಸರ್ವರಿಗೂ ಸೇರಿದ್ದು, ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯ.
ಬಿಜೆಪಿಯ ದ್ವೇಷ ಮತ್ತು ತಾರತಮ್ಯ ರಾಜಕಾರಣದ ವಿರುದ್ಧ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಸದನದಲ್ಲೇ ಧ್ವನಿ ಎತ್ತಿದ್ದೆ ಎಂದ ಸಿದ್ದರಾಮಯ್ಯ,

ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಸರ್ಕಾರ ಮಾಡಿದ್ದ ತಾರತಮ್ಯವನ್ನು ನಾವು ಈಗ ಸರಿಪಡಿಸಿದ್ದೇವೆ ಎಂದರು.

ನಮ್ಮ ಅವಧಿಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಮತಾಂಧರಿಗೆ, ಅನೈತಿಕ ಪೊಲೀಸ್ ಗಿರಿಗೆ, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನರಗುಂದ ಮಾಜಿ ಶಾಸಕ ಬಿ.ಆರ್ ಯಾವಗಲ್, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ವಿವೇಕ್ ಯಾವಗಲ್, ನ್ಯಾಯವಾದಿ ಎಮ್.ಎ ಮೌಲ್ವಿ, ಹಾಗೂ ಕುಟುಂಬ ವರ್ಗದವರು ಇದ್ದರು.


Spread the love

LEAVE A REPLY

Please enter your comment!
Please enter your name here