ಕನ್ಯಾಭಾಗ್ಯ ಕರುಣಿಸಲು ಗ್ರಾ.ಪಂ.ಗೆ ಮನವಿ ಮಾಡಿಕೊಂಡ ಯುವಕ…..!?
ವಿಜಯಸಾಕ್ಷಿ ಸುದ್ದಿ, ಗದಗ
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ ಇತ್ಯಾದಿಗಳಿಗಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು ಸಾಮಾನ್ಯವೇ. ಆಗೀಗ ಚಿತ್ರ-ವಿಚಿತ್ರ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸುದ್ದಿಗಳನ್ನೂ ಓದುತ್ತಲೇ ಇರುತ್ತೇವೆ. ಆದರೆ ಇಲ್ಲೊಬ್ಬ ಯುವಕ ಮದುವೆ ಮಾಡಿಕೊಳ್ಳಲು ವಧು ಸಿಗುತ್ತಿಲ್ಲ, ನನಗೆ ಮದುವೆಯಾಗಲು ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿ ಸುದ್ದಿಯಾಗಿದ್ದಾನೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಮುತ್ತು ಹೂಗಾರ ಎಂಬ ೨೮ ವರ್ಷದ ಯುವಕ, ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಕೊಂಡು ತಿಂಗಳಿಗೆ ೫೦ ಸಾವಿರ ಹಣ ಸಂಪಾದನೆ ಮಾಡುತ್ತಿದ್ದರೂ, ಮದುವೆ ಮಾಡಿಕೊಳ್ಳಲು ಕನ್ಯೆ ಸಿಗದೇ ಕಂಗಾಲಾಗಿ ಗ್ರಾಮ ಪಂಚಾಯತಿ ಪಿಡಿಒಗೆ ಮನವಿ ಸಲ್ಲಿಸಿದ್ದಾನೆ.
ಈ ಯುವಕನ ಅಭಿಪ್ರಾಯದಂತೆ, ಕನ್ಯೆ ಸಿಗದೇ ಇರುವುದಕ್ಕೆ ಮುಖ್ಯ ಕಾರಣ, ಸರಕಾರಿ ನೌಕರಿ ಇಲ್ಲದಿರುವುದು. ಸುಮಾರು ಹುಡುಗಿಯರನ್ನು ನೋಡಿದರೂ `ಕೆಲಸ ಏನು ಮಾಡ್ತೀರಿ?’ ಎಂದು ಕೇಳುತ್ತಾರೆ. ಗುತ್ತಿಗೆದಾರ ಎಂದ ತಕ್ಷಣವೇ ಸರಕಾರಿ ನೌಕರಿ ಇದ್ರೆ ಮಾತ್ರವೇ ಮಗಳನ್ನು ಕೊಡುತ್ತೇವೆ ಎನ್ನುತ್ತಿದ್ದಾರಂತೆ.
ಯಾವುದೇ ಜಾತಿಯ ಕನ್ಯೆ ಆದರೂ ಚಿಂತೆಯಿಲ್ಲ. ಒಟ್ಟಿನಲ್ಲಿ ಹುಡುಗಿ ಹುಡುಕಿಕೊಡಿ ಎಂಬುದಷ್ಟೇ ಮುತ್ತು ಹೂಗಾರನ ಮನವಿ. ಕಳೆದ ಎಂಟು ವರ್ಷಗಳಿಂದ ಕನ್ಯೆ ಹುಡುಕಿ ಹುಡುಕಿ ಬಳಲಿ ಬಸವಳಿದ ಮುತ್ತು ಈಗ ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯತ ಪಿಡಿಒಗೆ ಮನವಿ ಸಲ್ಲಿಸುವ ಮೂಲಕ ಕನ್ಯೆ ಭಾಗ್ಯ ನೀಡುವಂತೆ ಸರ್ಕಾರಕ್ಕೂ ಒತ್ತಾಯಿಸಿದ್ದಾನೆ.
ಮನವಿ ಪತ್ರ ಸ್ವೀಕರಿಸಿರುವ ಪಿಡಿಒ ಅನಿಲಗೌಡ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಮುತ್ತುವಿನ ಆಸೆ ಗ್ರಾಮ ಪಂಚಾಯತದ ವತಿಯಿಂದಾದರೂ ಈಡೇರಿ, ಸಮಸ್ಯೆ ಬಗೆಹರಿಯಲಿದೆಯಾ ಎಂಬುದು ಪ್ರಶ್ನೆಯಾಗಿದೆ. ಸರ್ಕಾರಿ ನೌಕರಿ ಇಲ್ಲದಿದ್ದರೂ ತೊಂದರೆಯಿಲ್ಲ, ಯೋಗ್ಯ ವರನಾಗಿದ್ದರೆ ಕನ್ಯಾ ಕೊಡ್ತೀವಿ ಎಂಬ ಮನೋಭಾವನೆ ಹೆಣ್ಣು ಹೆತ್ತವರಲ್ಲಿಯೂ ಮೂಡಲಿ.
ನನಗೆ ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇಲ್ಲ. ತಂದೆ-ತಾಯಿ ಇದ್ದಾರೆ. ಇದುವರೆಗೂ ಕನ್ಯಾನ್ವೇಷಣೆಗೆ ಹೋದಲ್ಲೆಲ್ಲಾ ಸಾಂಪ್ರದಾಯಿಕ ಉಪಚಾರದ ಬಳಿಕ, ಸರ್ಕಾರಿ ನೌಕರಿ ಇದ್ದವರಿಗೆ ಮಗಳನ್ನು ಕೊಡ್ತೀನಿ ಎಂದು ಮುಖ ತಿರುಗಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಕನ್ಯೆ ನೋಡಿ, ಈಗ ಜೀವನದಲ್ಲಿ ಜಿಗುಪ್ಸೆ ಬರುವಂತಾಗಿದೆ. ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ. ಒಳ್ಳೆಯ ಹುಡುಗಿಯಾಗಿದ್ದು, ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತಿದ್ದರೆ ಸಾಕು.
–ಮುತ್ತು ಹೂಗಾರ. ನೊಂದ ಯುವಕ