ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯ ಮುಂಡರಗಿ ತಹಸೀಲ್ದಾರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸರು ಬುಧವಾರ ದಾಳಿ ನಡೆಸಿ, ಲಂಚ ಪಡೆಯುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಂ.ವಿ.ಮಲ್ಲಾಪೂರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಂದಾಯ ಇಲಾಖೆಯ ಕಂಪ್ಯೂಟರ್ ಆಪರೇಟರ್ ಎಂ.ಐ.ಉಪ್ಪಾರಟ್ಟಿ ಹಣ ತೆಗೆದುಕೊಳ್ಳುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ಪ್ರಕರಣದ ವಿವರ
ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ಕರಿಯಪ್ಪ ಹನಮಪ್ಪ ಬಂಗಿ ಎಂಬುವವರು ತಮ್ಮ ತಂದೆಯ ಜಮೀನಿನ ಆರ್‌ಟಿಸಿಯಲ್ಲಿ ಕಾಲಂ ಸಂಖ್ಯೆ 11ರಲ್ಲಿ ಓರ್ವರ ಹೆಸರು ತೆಗೆದು ಹಾಕಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ತಹಸೀಲ್ದಾರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಎಂ.ಐ.ಉಪ್ಪಾರಟ್ಟಿ ಎಂಬ ವ್ಯಕ್ತಿ 12,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಕರಿಯಪ್ಪ ಎಸಿಬಿಗೆ ದೂರು ನೀಡಿದ್ದರು.
ಈ ಪೈಕಿ ಬುಧವಾರ 5,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ ಎಸಿಬಿ ಪೊಲೀಸರು ಆರೋಪಿ ಉಪ್ಪಾರಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಎಸಿಬಿ ಸಿಪಿಐ ಆರ್ ಎಫ್ ದೇಸಾಯಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡ್ರ, ವೀರೇಶ್ ಜೋಳದ, ನಾರಾಯಣ ತಾಯಣ್ಣವರ್, ವೀರಣ್ಣ ಜಾಲಿಹಾಳ, ಶರೀಫ್ ಮುಲ್ಲಾ, ಮಂಜುನಾಥ್ ಮುಳಗುಂದ, ವೀರೇಶ್ ಬಿಸನಳ್ಳಿ, ನಾರಾಯಣರಡ್ಡಿ ವೆಂಕರಡ್ಡಿ ಹಾಗೂ ತಾರಪ್ಪ ಕಾರ್ಯಾಚರಣೆಯಲ್ಲಿದ್ದರು.