ಟ್ರಾಕ್ಟರ್ ಮಾಲೀಕನ ವಿರುದ್ಧವೂ ಪ್ರಕರಣ…..
ವಿಜಯಸಾಕ್ಷಿ ಸುದ್ದಿ, ರೋಣ
ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನಾಫಲಕಗಳನ್ನು ಅಳವಡಿಸದೇ, ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದ್ದು, ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ಹಾಗೂ ಟ್ರಾಕ್ಟರ್ ಮಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ತಾಲೂಕಿನ ಹೊಳೆಆಲೂರ-ಹೊಳೆಮಣ್ಣೂರ ರಸ್ತೆಯ ನಡುವೆ ಗಾಡಗೋಳಿ ಸಮೀಪದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲಾಗುತ್ತಿತ್ತು. ಸೇತುವೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಮತ್ತು ಸೂಚನಾ ಫಲಕಗಳನ್ನೂ ಅಳವಡಿಸಿರಲಿಲ್ಲ.
ಬದಲಾಗಿ, ರಸ್ತೆಗೆ ಅಡ್ಡಲಾಗಿ ಟ್ರಾಲಿ ಸಹಿತ ಟ್ರಾಕ್ಟರ್ ಒಂದನ್ನು ನಿಲ್ಲಿಸಲಾಗಿತ್ತು. ಏ.30ರಂದು ರಾತ್ರಿ 7 ಗಂಟೆಯ ಸುಮಾರಿಗೆ ದೂರುದಾರರ ಸಹೋದರ, ಮಾಳವಾಡದ ಠಕ್ಕಪ್ಪ ಭರಮಪ್ಪ ಚಲವಾದಿ(28) ಕೆಲಸ ಮುಗಿಸಿ ಬೈಕ್‌ನಲ್ಲಿ ಅದೇ ರಸ್ತೆಯಲ್ಲಿ ಹಿಂದಿರುಗಿ ಬರುತ್ತಿದ್ದರು.
ಈ ಸಮಯದಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರ ಹಾಗೂ ಟ್ರಾಕ್ಟರ್ ಮಾಲಕನ ನಿರ್ಲಕ್ಷ್ಯತನವೇ ಕಾರಣವೆಂದು ಮೃತರ ಸಹೋದರ ದೂರು ದಾಖಲಿಸಿದ್ದಾರೆ.
ಅಪರಾಧ 0069/2023, indian motor vehicles act-1988 ರ ಕಲಂ 177, ಐಪಿಸಿ 1860ರ ಕಲಂ 279,283,304(ಎ)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ರೋಣ ಪೊಲೀಸರು ತನಿಖೆ ನಡೆಸಿದ್ದಾರೆ.