ವಿಜಯಸಾಕ್ಷಿ ಸುದ್ದಿ, ಹಾವೇರಿ:
ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ಬಳಿ ಎರಡು ಕಾರು ಮತ್ತು ಮೆಕ್ಕೆಜೋಳ ತುಂಬಿದ ಲಾರಿ ಮಧ್ಯೆ ಶನಿವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮತ್ತಿಕೋಟೆ ಗ್ರಾಮದ ಶಂಕರಗೌಡ ಬಸನಗೌಡ ನಾಗಪ್ಪಗೌಡರ್ (35), ಕರ್ನಲ್ಲಿ ಗ್ರಾಮದ ಪುನೀತ್ ಹರಮುಚಡಿ (12), ಮುಚಡಿ ಗ್ರಾಮದ ಶಾಂತಮ್ಮ ಶಿವಾನಂದಪ್ಪ ಹೊಟ್ಟಿಗೌಡರ(32) ಹಾಗೂ ರಘು ಶಿವಾನಂದಪ್ಪ ಹೊಟ್ಟಿಗೌಡರ (14) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.
ಇನ್ನು 26 ವರ್ಷದ ಪವಿತ್ರಾ, 16 ವರ್ಷದ ಪೂಜಾ ಹರಮುಚಡಿ, 7 ವರ್ಷದ ಪ್ರೀತಮ್, 50 ವರ್ಷದ ಕಲಾವತಿ ನಾಗಪ್ಪಗೌಡರ, 4 ವರ್ಷದ ಪೃಥ್ವಿ, 25 ವರ್ಷದ ಪ್ರೇಮಾ, 30 ವರ್ಷದ ಜ್ಯೋತಿ ಹಾಗೂ ತಿಪ್ಪೇಶ ರಾಗಿಕೊಪ್ಪ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದರ ಹಿಂದೆ ಒಂದು ಚಲಿಸುತ್ತಿದ್ದ ಎರಡೂ ಕಾರುಗಳಿಗೆ ಮೆಕ್ಕೆಜೋಳ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಹೊಡೆದಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.