ವಿಜಯಸಾಕ್ಷಿ ಸುದ್ದಿ, ಗದಗ:
ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿಸಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ಜಾಲವೊಂದನ್ನು ಸಾರ್ವಜನಿಕರೇ ಬಯಲಿಗೆ ಎಳೆದಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಸಾರ್ವಜನಿಕರ ಈ ಕಾರ್ಯಾಚರಣೆ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ ಎಂದು ಎನ್ನಲಾಗುತ್ತದೆ.
ಸಂಗ್ರಹಿಸಿದ್ದ ಗೋದಾಮಿನಿಂದ ಅಕ್ಕಿ ಲೋಡ್ ಮಾಡಿಕೊಂಡು ಹೊರಟಾಗ ಕೆಲವು ಸಾರ್ವಜನಿಕರು ಲಾರಿಗೆ ತಡೆಯೊಡ್ಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಾಲವಾಡಗಿ ರಸ್ತೆಯ ಸೃಷ್ಟಿ ಫಾರ್ಮ್ ಹೌಸ್ ಬಳಿ ಈ ಘಟನೆ ನಡೆದಿತ್ತು. ಆಗ ಚಾಲಕ ಹೊನ್ನಿನಾಯಕಹಳ್ಳಿಯ ನಿಂಗಪ್ಪ ಭರಮಪ್ಪ ಗೌಡ್ರ, ಲಕ್ಷ್ಮೇಶ್ವರ ಬಳಿಯ ಸೋಗಿಹಾಳದ ಶರಣಪ್ಪ ನಿಂಗಪ್ಪ ಜಾಡರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಮುಖ ಆರೋಪಿ, ದಂಧೆಕೋರ, ಚಾಲಾಕಿ ವೀರೇಶ್ ಬಡಿಗೇರ ಮಾತ್ರ ಪರಾರಿಯಾಗಿದ್ದಾನೆ.
ಹಲವು ತಿಂಗಳಿನಿಂದಲೂ ಜಿಲ್ಲೆಯ ಮುಂಡರಗಿಯಲ್ಲಿ ಈ ದಂಧೆ ಎಗ್ಗಿಲ್ಲದೆ ಸಾಗಿದೆ. ಆದರೂ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸೋಜಿಗದ ಸಂಗತಿಯಾಗಿದೆ.
ಎರಡು ತಿಂಗಳ ಹಿಂದೆ ಮುಂಡರಗಿ ಪಟ್ಟಣದಿಂದ ಸಾಗಾಟವಾಗುತ್ತಿದ್ದ ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯನ್ನು ವಿಜಯನಗರ ಜಿಲ್ಲೆಯ ಕೊಟ್ಟೂರು ಬಳಿ ಅಲ್ಲಿನ ಪೊಲೀಸರು ತಡೆದು ಅಪಾರ ಪ್ರಮಾಣದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದರು. ಚಾಲಕನನ್ನು ಮಾತ್ರ ಬಂಧಿಸಿದ್ದರು.
ರೂವಾರಿ ಮುಂಡರಗಿ ಪಟ್ಟಣದ ವೀರೇಶ್ ಬಡಿಗೇರ ತಲೆಮರೆಸಿಕೊಂಡು, ಜಾಮೀನು ಪಡೆದಿದ್ದ. ಕೆಲವೇ ದಿನಗಳಲ್ಲಿ ಮತ್ತೆ ದಂಧೆ ಚಾಲೂ ಮಾಡಿದ್ದ. ಈಗ ಸಾರ್ವಜನಿಕರ ಪ್ರಯತ್ನದಿಂದ ಸಿಕ್ಕಿಬಿದ್ದಿದ್ದರೂ ಮತ್ತೆ ಪರಾರಿಯಾಗಿದ್ದಾರೆ.
ಇದನ್ನೂ ಓದಿ ಲಕ್ಷಾಂತರ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ; ದಂಧೆಕೋರ ವೀರೇಶ್ ಬಡಿಗೇರನಿಗೆ ಬಿಸಿ!
ಲಾರಿ ಸಂಖ್ಯೆ ಕೆಎ 28 ಎ/7625ರಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ 210 ಕ್ವಿಂಟಲ್ ಪಡಿತರ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಷ್ಟೆಲ್ಲ ಆದ ಮೇಲೆ ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ಶಿವರಾಜ್ ಕೊಟ್ರಪ್ಪ ಆಲೂರು ಮುಂಡರಗಿ ಠಾಣೆಗೆ ಮೂರು ಜನರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಯುತ್ತದೆ.