HomeDharwadಅಣ್ಣಿಗೇರಿ ಮಹಾಜನತೆಗೆ ಶಾಶ್ವತ ಕುಡಿಯುವ ನೀರಿನ ಭಾಗ್ಯ

ಅಣ್ಣಿಗೇರಿ ಮಹಾಜನತೆಗೆ ಶಾಶ್ವತ ಕುಡಿಯುವ ನೀರಿನ ಭಾಗ್ಯ

For Dai;y Updates Join Our whatsapp Group

Spread the love

ರೂ.54 ಕೋಟಿ ವೆಚ್ಚದ ಯೋಜನೆ ಲೋಕಾರ್ಪಣೆ – ಜ.13 ರಂದು

ಬಸಾಪೂರ ಗ್ರಾಮದ ಬಳಿ 76 ಎಕರೆ ಪ್ರದೇಶದಲ್ಲಿ ಜಲಾಗಾರ ನಿರ್ಮಾಣ

ವಿಜಯಸಾಕ್ಷಿ ಸುದ್ದಿ, ನವಲಗುಂದ/ಅಣ್ಣಿಗೇರಿ

ಅಮೃತೇಶ್ವರನ ಪುಣ್ಯ ಭೂಮಿ, ಪಂಪ ಹುಟ್ಟಿದ ನಾಡಿನ ಜನತೆಯ ದಶಕಗಳ ಬೇಡಿಕೆಯಾಗಿದ್ದ ಶಾಶ್ವತ ಶುದ್ಧ ಕುಡಿಯುವ ನೀರಿನ ಕನಸು ನನಸಾಗುತ್ತಿದ್ದು ರೂ.54 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು ಜ.13 ರಂದು ಬಸಾಪೂರ ಗ್ರಾಮದ ಬಳಿ ಲೋಕಾರ್ಪಣೆಗೊಳ್ಳುತ್ತಲಿರುವುದು ಸೌಭಾಗ್ಯವೆ ಸರಿ.

ಅಣ್ಣಿಗೇರಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಎಷ್ಟು ಹೋರಾಟ ಮಾಡಿದ್ದಾರೆಂದರೆ ಕಣ್ಣು ಒದ್ದೆಯಾಗುತ್ತದೆ.  ಸಿಹಿ ನೀರು ಸಿಗುವುದಿರಲಿ ಉಪ್ಪು ನೀರು ಕುಡಿಯಲು ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಿಹಿ ನೀರು ಕುಡಿಯಲಿಕ್ಕಾಗಿಯೇ ಬಸಾಪೂರ ಹಾಗೂ ಅಣ್ಣಿಗೇರಿ ಜನತೆಯ ನಡುವೆ ಗಲಾಟೆಯಾಗಿ ಜೈಲುವಾಸ ಅನುಭವಿಸಿಯೂ ಬಂದಿದ್ದನ್ನು ಯಾರು  ಮರೆಯುವಂತಿಲ್ಲ.  

ಈ ಸಮಸ್ಯೆಯಿಂದಾಗಿ ಅಣ್ಣಿಗೇರಿಗೆ ಕನ್ಯೆ ಕೊಡಲು ಹಿಂದೇಟು ಹಾಕುತ್ತಿದ್ದರು. ಫಲವತ್ತಾದ ಭೂಮಿ, ಸಮೃದ್ಧವಾದ ಈ ನಾಡಿನಲ್ಲಿ “ಬಂಡಿ ತುಂಬ ಅನ್ನ, ಗಿಂಡಿ ತುಂಬ ನೀರು” ಎಂಬ ನಾಣ್ಣುಡಿ ಎಲ್ಲರ ಬಾಯಲ್ಲು ಹರಿದಾಡುತ್ತಿತ್ತು.

ಈ ಜನತೆ ಅನುಭವಿಸುತ್ತಿದ್ದ  ಕಷ್ಟವನ್ನು ಅರಿತಿದ್ದ ಅಂದಿನ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಣ್ಣಿಗೇರಿ ಜನತೆಗೊಂದು ಶಾಶ್ವತವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕೆಂದು ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ರೂ.44.75 ಕೋಟಿ ವೆಚ್ಚದ ಕ್ರೀಯಾ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡು ಯಶಸ್ವಿಯಾದರು.

ನಂತರದ ಅವಧಿಗೆ ಶಾಸಕರಾದ ಎನ್.ಎಚ್.ಕೋನರಡ್ಡಿ ಭೂಮಿ ಖರೀದಿ ಪ್ರಕ್ರಿಯೆ ಪ್ರಾರಂಭ ಮಾಡಿ ಬಸಾಪೂರ ಗ್ರಾಮದ ರೈತರ ಮನವೊಲಿಸಿದ ಫಲವಾಗಿ 76 ಎಕರೆ ಜಮೀನನ್ನು ಖರೀದಿಸಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಬೆನ್ನುಬಿದ್ದು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ನಂತರ 2017 ರಲ್ಲಿ ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾಗಿದ್ದ ರೂಪಾ ಶಿವಶಂಕರ ಕಲ್ಲೂರ, ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ನೇತ್ರತ್ವದಲ್ಲಿ ಭೂಮಿ ಪೂಜೆ ಮಾಡಿ ಚಾಲನೆ ನೀಡಲಾಯಿತು.

ಕೆರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು ನಿಜ. ನಂತರ ಹಣದ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದುಬಿಟ್ಟಿತು. ನಂತರ 2018 ರಲ್ಲಿ ಮತ್ತೇ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ನಿರಂತರ ಪರಿಶ್ರಮ ವಹಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದ ಪರಿಣಾಮ ಈಗ ಬಸಾಪೂರ ಗ್ರಾಮದ ಬಳಿ  ರೂ.54 ಕೋಟಿ ವೆಚ್ಚದ ನೀರಂತರ ನೀರು ಸರಬರಾಜು ಯೋಜನೆ ಕಾಮಗಾರಿ ಪೂರ್ಣಗೊಂಡು ಮಲಪ್ರಭೆಯ ಕೃಪೆಯಿಂದ ಜಲಾಗಾರ ತುಂಬಿಕೊಂಡಿದ್ದು  ಜ.13 ರಂದು ಲೋಕಾರ್ಪಣೆಗೊಳ್ಳುತ್ತಲಿದೆ.

ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಕೆರೆಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೆರೆಗೆ ಭೂಮಿ ನೀಡಿದ ರೈತರಿಗೆ ಸನ್ಮಾನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.

ಕೊಟ್ಟ ಭರವಸೆ ಈಡೇರಿಸಿದ ಸಾರ್ಥಕತೆ ಮನೋಭಾವನೆ – ಸಚಿವ  ಮುನೇನಕೊಪ್ಪ

ಅಣ್ಣಿಗೇರಿ ಜನತೆಯ ಕುಡಿಯುವ ನೀರಿಗೊಂದು ಶಾಶ್ವತ ಪರಿಹಾರ ಮಾಡಬೇಕೆಂಬುದು ನನ್ನ ಜೀವನದ ಗುರಿಯಾಗಿತ್ತು. ಜಗದೀಶ ಶೆಟ್ಟರ ಮುಖ್ಯಮಂತ್ರಿ ಅವಧಿಯಲ್ಲಿ ಅನುಮೋದನೆ ಪಡೆದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಕಾರದೊಂದಿಗೆ ಈಗಿನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರ ನೇತ್ರತ್ವದ ಸರ್ಕಾರದಲ್ಲಿ ಸಚಿವನಾಗಿ ಕೊಟ್ಟ ಭರವಸೆಯನ್ನು ಈಡೇರಿಸಿ ಲೋಕಾರ್ಪಣೆ ಮಾಡುತ್ತಿರುವುದು ನನ್ನ ಸೌಭಾಗ್ಯ. ಯೋಜನೆಗೆ ಭೂಮಿ ನೀಡಿದ ರೈತರು, ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೆ ಚಿರಋಣಿಯಾಗಿದ್ದೇನೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.  


                                     

ಅಣ್ಣಿಗೇರಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನಿರಂತರ ಪರಿಶ್ರಮ ಪಟ್ಟಿದ್ದ ಹಿಂದಿನ ಎಲ್ಲ ಶಾಸಕರು, ಪುರಸಭೆ ಅಧ್ಯಕ್ಷರು, ಸದಸ್ಯರು, ಭೂಮಿ ನೀಡಿದ ರೈತರನ್ನು ಮತ್ತು ಮೊದಲು ಕ್ರಿಯಾ ಯೋಜನೆ ತಯಾರಿಸಿದ್ದ ಅಂದಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾಗಿದ್ದ ಎಸ್.ಚಂದ್ರಪ್ಪ ಅವರನ್ನು  ವಿಶೇಷವಾಗಿ ಆಹ್ವಾನಿಸಿ ಗೌರವಿಸಬೇಕಾಗಿತ್ತು.

-ಶಿವಶಂಕರ್ ಕಲ್ಲೂರ, ಜನಪರ ಹೋರಾಟಗಾರ, ವಕೀಲ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!