ವಿಜಯಸಾಕ್ಷಿ ಸುದ್ದಿ, ಗದಗ:
ನಗರದ ಮುನ್ಸಿಪಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಉನ್ನತ ವ್ಯಾಸಂಗಕ್ಕೆ ಹಣಕಾಸಿನ ಸೌಲಭ್ಯವಿಲ್ಲದೇ, ಆಟೋ ಓಡಿಸಿ ಬಂದ ಕಾಸಿನಲ್ಲಿ ತೋಂಟದಾರ್ಯ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ನೌಕರಿ ಪಡೆದ ಮುಂಡರಗಿ ಪೊಲೀಸ್ ಠಾಣೆಯ ಎಎಸ್‌ಐ ಒಬ್ಬರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪೊಲೀಸ್ ಪದಕ ಪ್ರಶಸ್ತಿ ಲಭಿಸಿದೆ.
ಕರ್ನಾಟಕದಲ್ಲಿ ಒಟ್ಟು 19 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಸಿಕ್ಕಿದ್ದು, ಅದರಲ್ಲಿ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿರುವ ಮಾರುತಿ ಜೋಗದಂಡಕರ್ ಅವರಿಗೆ ಪ್ರಶಸ್ತಿ ದೊರತಿದೆ.

1993ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಜೋಗದಂಡಕರ್ ಅವರು ಶಿಗ್ಗಾಂವ್, ಮುಂಡರಗಿ, ನರಗುಂದ, ಗದಗ ಗ್ರಾಮೀಣ ಹಾಗೂ ಜಿಲ್ಲಾ ಪೊಲೀಸ್ ಕಾರ್ಯಾಲಯಗಳಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ್ದರು. ಕಾನ್ಸ್‌ಟೇಬಲ್ ಹುದ್ದೆಯಿಂದ 2019ರಲ್ಲಿ ಪದೋನ್ನತಿ ಪಡೆದಿರುವ ಜೋಗದಂಡಕರ್ ಅವರು ಇದೀಗ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೇಕ್ಟರ್(ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಂಡರಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜೋಗದಂಡಕರ್ ಅವರು ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಕರ್ನಾಟಕ ರಾಜ್ಯಕ್ಕೆ ಪ್ರಥಮವಾಗಿ ಕ್ರೈಂ ಇನ್ ಇಂಡಿಯಾ ಮಾಹಿತಿ ಸಲ್ಲಿಸುತ್ತಾ ಬಂದಿರುವ ಇವರು ಗದಗ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿದಂದಲೂ ಪ್ರಶಂಸೆ ಪಡೆದಿದ್ದಾರೆ. ಬಹುಮಾನ, ಪುರಷ್ಕಾರಗಳನ್ನು ಪಡೆದಿದ್ದಾರೆ.
ಪ್ರಶಸ್ತಿಗೆ ಭಾಜನರಾದ ಮಾರುತಿ ಜೋಗದಂಡಕರ್ ಅವರಿಗೆ ಎಸ್ಪಿ ಶಿವಪ್ರಕಾಶ್ ದೇವರಾಜು, ಗದಗ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಉಪವಿಭಾಗದ ಡಿವೈಎಸ್ಪಿ ಶಂಕರರ್ ಎಮ್ ರಾಗಿ, ಡಿಸಿಆರ್ ಬಿ ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಅಭಿನಂಧಿಸಿದ್ದಾರೆ.