ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿಯ ಐವರು, ‌ಕಾಂಗ್ರೆಸ್ ಪಕ್ಷದ ಇಬ್ಬರ ವಿರುದ್ಧ ಕೇಸ್

0
Spread the love

ಪೂರ್ವಾನುಮತಿಯಿಲ್ಲದೇ ವಾಹನಕ್ಕೆ ಬಿಜೆಪಿ ಧ್ವಜ ಅಳವಡಿಸಿಕೊಂಡು ಪ್ರಚಾರ ನಡೆಸಿದ ಐವರ ವಿರುದ್ಧ ಪ್ರಕರಣ

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣಾ ಅಧಿಕಾರಿಗಳಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಪಕ್ಷದ ಧ್ವಜ ಅಳವಡಿಸಿಕೊಂಡ ಬಿಜೆಪಿಯ ಐವರು, ಕಾಂಗ್ರೆಸ್ ಪಕ್ಷದ ಇಬ್ಬರು ತಮ್ಮ ವಾಹನಗಳಿಗೆ ಪಕ್ಷದ ಬ್ಯಾನರ್, ಧ್ವಜ ಹಾಗೂ ಫ್ಲೆಕ್ಸ್ ಗಳನ್ನು ಅಳವಡಿಸಿಕೊಂಡು ಪ್ರಚಾರ ನಡೆಸಿದ ಆರೋಪದಲ್ಲಿ ಕೇಸ್ ದಾಖಲಾಗಿದೆ.

ಕಾಂಗ್ರೆಸ್‌ ಪಕ್ಷದ ನಿಯೋಜಿತ ಅಭ್ಯರ್ಥಿ ಎಚ್.ಕೆ.ಪಾಟೀಲರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.

ಎ. 17ರ ಮುಂಜಾನೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗಿನ ಅವಧಿಯಲ್ಲಿ ಗದಗ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಿಂದ ಪ್ರಾರಂಭಗೊಂಡು ಶಹರದ ಎ.ಸಿ. ಕಚೇರಿಯ ಚುನಾವಣಾಧಿಕಾರಿಗಳ ಕಾರ್ಯಾಲಯದವರೆಗೆ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಸಾಗಿತ್ತು.

ಈ ಸಮಯದಲ್ಲಿ ಶಾಸಕರು ತೆರಳುತ್ತಿದ್ದ ಅಲಂಕೃತಗೊಂಡ ಗೂಡ್ಸ್‌ ವಾಹನಕ್ಕೆ 2 ಬ್ಯಾನರ್‌, 6 ಕಾಂಗ್ರೆಸ್‌ ಧ್ವಜಗಳು, 2 ಸ್ಪೀಕರ್‌, 250 ಕಾಂಗ್ರೆಸ್‌ ಧ್ವಜಗಳು ಹಾಗೂ 250 ಕಾಂಗ್ರೆಸ್‌ ಪಕ್ಷದ ಶಾಲುಗಳು, ಇನ್ನೊಂದು ಆಟೋ ರಿಕ್ಷಾಕ್ಕೆ 100 ವ್ಯಾಟ್‌ ಆಂಪ್ಲಿಫೈರ್‌, ಲೌಡ್‌ಸ್ಪೀಕರ್‌ ಅಳವಡಿಸಲು ಏ.15ರಂದು ಅನುಮತಿ ಪಡೆಯಲಾಗಿತ್ತು.

ಅದರಂತೆ ಎ.17ರಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್.ಕೆ.ಪಾಟೀಲರು ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು. ಆದರೆ, ಒಬ್ಬ ಟಿವಿಎಸ್‌ ಬೈಕ್‌ ಸವಾರ ಹಾಗೂ ಒಂದು ಪ್ಯಾಸೇಂಜರ್‌ ರಿಕ್ಷಾ ಚಾಲಕ ಕಾಂಗ್ರೆಸ್‌ ಪಕ್ಷದ ಧ್ವಜವನ್ನು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಅಳವಡಿಸಿಕೊಂಡು ಏ.17ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್‌ ಡಿಸ್ಪಿಗರ್ಮೆಂಟ್‌ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ ಪಕ್ಷದ ಗದಗ ಮತಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿಯವರು ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೇ ತಮ್ಮ ವಾಹನಕ್ಕೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಐವರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ.

ಅನಿಲ ಮೆಣಸಿನಕಾಯಿ ಅವರು ಮೆರವಣಿಗೆಯಲ್ಲಿ ತೆರಳುವ ತೆರೆದ ವಾಹನಗಳಿಗೆ ಬಿಜೆಪಿಯ ಧ್ವಜ, ಬ್ಯಾನರ್‌, ಫ್ಲೆಕ್ಸ್‌ಗಳನ್ನು ಅಳವಡಿಸಿಕೊಳ್ಳಲು ಪಕ್ಷದ ಜಿಲ್ಲಾಧ್ಯಕ್ಷರು ಎ.16ರಂದು ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡಿದ್ದು, ಅದರಂತೆ ಅನಿಲ ಮೆಣಸಿನಕಾಯಿ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲು ಎ.18ರಂದು ತೆರಳಿದ್ದರು.

ಆದರೆ, ಐದು ಗೂಡ್ಸ್‌ ವಾಹನಗಳ ಚಾಲಕರು ಚುನಾವಣಾಧಿಕಾರಿಗಳ ಪೂರ್ವಾನುಮತಿಯಿಲ್ಲದೇ ತಮ್ಮ ವಾಹನಗಳಿಗೆ ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಎ.18ರ ಮಧ್ಯಾಹ್ನ 12-30ರಿಂದ 3 ಗಂಟೆಯವರೆಗೆ ಶಹರದ ಎ.ಸಿ. ಕಚೇರಿಯ ಮುಂದೆ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದರು.

ಇದು ಮಾದರಿ ನೀತಿ ಸಂಹಿತೆಯ  ಉಲ್ಲಂಘನೆಯಾಗಿದ್ದು, ಸದರಿ ಆರೋಪಿತರ ಮೇಲೆ ಕಲಂ.3, ಕರ್ನಾಟಕ ಓಪನ್‌ ಡಿಸ್ಪಿಗರ್ಮೆಂಟ್‌ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಚುನಾವಣಾ ಎಫ್‌ಎಸ್‌ಟಿ ಅಧಿಕಾರಿ ಗುರುನಾಥ ಮಾಣೆಕಪ್ಪ ದಸಪಳ್ಳಿ ಇವರು ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ನೀಡಿರುವ ಮಾಹಿತಿಯನ್ವಯ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here