ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಜಾತಿಗಳ ಮಧ್ಯೆ ದ್ವೇಷ ಮೂಡಿಸುವ ಪೋಸ್ಟ್
ವಿಜಯಸಾಕ್ಷಿ ಸುದ್ದಿ, ರೋಣ
ವಾಟ್ಸಪ್ ಗ್ರೂಪ್ ಒಂದರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಜಾತಿಗಳ ಮಧ್ಯೆ ದ್ವೇಷ ಮೂಡಿಸುವ ಪ್ರಚೋದನಕಾರಿ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿತ ರೋಣ ತಾಲೂಕಿನ ಕೌಜಗೇರಿಯ ಶಿವರಾಜ ವಣ್ಣೂರ ಈತ ಏ.16ರ ಮಧ್ಯಾಹ್ನ 3.09ರ ಸುಮಾರಿಗೆ ಹಾಲುಮತ ಸಭಾ ಎಂಬ ವಾಟ್ಸಪ್ ಗುಂಪಿನಲ್ಲಿ ಗದಗ, ರೋಣ, ನರಗುಂದ, ನವಲಗುಂದ, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುರುಬರನ್ನು ಉದ್ದೇಶಿಸಿ ಸಂದೇಶ ಕಳಿಸಿದ್ದರು.
ಅದರಲ್ಲಿ, ನಾವು ಕುರುಬರು ಹಾಲುಮತದಲ್ಲಿ ಹುಟ್ಟಿದ್ದೇ ನಿಜವಾದರೆ, ನಮ್ಮ ಸಮಾಜದ ವ್ಯಕ್ತಿ ಯಾವ ಕಡೆ ನಿಲ್ಲುತ್ತಾರೋ, ಅವರನ್ನೇ ಬೆಂಬಲಿಸಬೇಕು. ಕುರುಬ ರೆಡ್ಡಿಗಳಿಗೆ ಹುಟ್ಟಿದ್ದಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು.
ರೆಡ್ಡಿ ಸಮುದಾಯದ ನಾಯಕರು ನಮ್ಮಲ್ಲಿ ಎರಡು ಬಣ ಮಾಡಿ ಕುರುಬರನ್ನು ಒಡೆಯುತ್ತಿದ್ದಾರೆ. ಇವರಿಗೆ ನಾವು ಬುದ್ಧಿ ಕಲಿಸದಿದ್ದರೆ ಕುರುಬ ಸಮಾಜಕ್ಕೆ ಅನಾಹುತ ಕಾದಿದೆ ಎಂಬರ್ಥದ ಸಂದೇಶ ರವಾನಿಸಿದ್ದರು.
ರೋಣದ ಸಾಧುಮಠದ ಈಶಪ್ಪ ಸಿದ್ದಪ್ಪ ಜಗ್ಗಲಿ ಈ ಸಂದೇಶದಿಂದ ಮನನೊಂದು, ಇದರಲ್ಲಿ ಆರೋಪಿತನಾದ ಶಿವರಾಜ ವಣ್ಣೂರ ಚುನಾವಣಾ ಆಯೋಗದ ಆದೇಶಗಳನ್ನು ಮೀರಿ ವರ್ತಿಸಿದ್ದು, ಸದರಿಯವನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
ದೂರು ಸ್ವೀಕರಿಸಿದ ರೋಣ ಠಾಣೆಯ ಪೊಲೀಸರು ಕಲಂ: 125, ಆರ್.ಪಿ ಕಾಯ್ದೆ-1951 ಮತ್ತು ಐಪಿಸಿ ಕಲಂ 505(2) ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.