ಶಾಸಕರಾದ ರಾಮಣ್ಣ ಲಮಾಣಿ, ಪ್ರದೀಪ್ ಶೆಟ್ಟರ್, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿ ಹಲವರ ವಿರುದ್ಧ ಪ್ರಕರಣ…….
ಪಕ್ಷದ ಮುಖಂಡರಲ್ಲಿ ಎಚ್ಚರಿಕೆ ಮೂಡಿಸಿದ ಮೊದಲ ಪ್ರಕರಣ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಪಕ್ಷದ ಕಾರ್ಯ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ವಿಪ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ಸೇರಿ ಹಲವರ ಮೇಲೆ ಕಾನೂನು ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ.
ಏ.೬ರಂದು ಗುರುವಾರದಂದು ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿ ಸೇರಿದ್ದ ಆಕಾಂಕ್ಷಿಗಳು, ಕಾರ್ಯಕರ್ತರು ಬಿಜೆಪಿ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಲ್ಲದೆ, ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉಂಟಾದ ಗೊಂದಲ ಬಗೆಹರಿಸಲು ಆಣೆ ಪ್ರಮಾಣ ಮಾಡಿಸಿದ್ದಾರೆ. ಈ ವಿಷಯ ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಆಗಿರುವ ಶಂಕರ ಹುಲ್ಲಮ್ಮನವರ ದೂರು ದಾಖಲಿಸಿದ್ದಾರೆ.
ಈ ವೇಳೆ ಹಾಜರಿದ್ದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ.ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ, ಭೀಮಸಿಂಗ್ ರಾಥೋಡ, ಗದಗ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮೇಲೆ ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಇದೇ ಮೊದಲ ಬಾರಿ ಇಂಥದೊಂದು ವಿಶೇಷ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಜಿಲ್ಲೆಯಲ್ಲಿ ಬೇರೆ ಬೇರೆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಎಚ್ಚರಿಕೆಯ ಘಂಟೆ ಮೊಳಗಿಸಿದೆ.