ಸಾರ್ವಜನಿಕವಾಗಿ ಧೂಮಪಾನ ಮಾಡುವ ಜನರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂವು
ವಿಜಯಸಾಕ್ಷಿ ಸುದ್ದಿ, ಹೊಸಕೋಟೆ
ತಾಲೂಕಿನ ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪಿಲ್ಲಗುಂಪಿ ಕೈಗಾರಿಕಾ ಪ್ರದೇಶದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕೈಗಾರಿಕಾ ಪ್ರದೇಶದ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಹಾಗೂ ಸಾರ್ವಜನಿಕವಾಗಿ ಧೂಮಪಾನ ಮಾಡುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂವು ನೀಡಿ ಧೂಮಪಾನ ವ್ಯಸನಿಗಳಾಗದಂತೆ ಮನವೊಲಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ವೀಣಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಶಾಲಾ ಮಕ್ಕಳು ಮತ್ತು ವಯೋವೃದ್ಧರು ಧೂಮಪಾನ ಹಾಗೂ ಮಧ್ಯಪಾನ ವ್ಯಸನಿಗಳಾಗುತ್ತಿದ್ದು, ಇದರಿಂದ ಸಮಾಜದ ಆರೋಗ್ಯ ಸಾರ್ವಜನಿಕರ ಆರ್ಥಿಕ ಬದುಕು ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಗ್ಧ ಮಕ್ಕಳಿಂದ ಗುಲಾಬಿ ಹೂ ನೀಡಿ, ಧೂಮಪಾನ ಹಾಗೂ ಮಧ್ಯಪಾನದ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಲಾಗುವ ಈ ವಿಶಿಷ್ಟ ಕಾರ್ಯಕ್ರಮವೇ ಗುಲಾಬಿ ಆಂದೋಲನಎಂದು ತಿಳಿಸಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಗುರುರಾಜರವರು ಹೊಸಕೋಟೆ ತಾಲೂಕಿನಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಅಡಿಯಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳ ಆರೋಗ್ಯ ಇಲಾಖೆಯೊಂದಿಗಿನ ಸಮನ್ವಯತೆಯೊಂದಿಗೆ ಕಾಲಕಾಲಕ್ಕೆ ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿ ಮಾಡಿ, ನಿರಂತರ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಸಮುದಾಯ ಆರೋಗ್ಯ ಅಧಿಕಾರಿ ಕುಮಾರಿ ಗೋಮತಿ, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಎಚ್ ಸತ್ಯಾವತಿ, ಸಹ ಶಿಕ್ಷಕರಾದ ಶ್ರೀಮತಿ ಅಶ್ವತ್ತಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.