ಬಾಗಿಲಿಗೆ ಮಳೆ ಬಡೆದು ಸೊಸೆಯಾಗಿ ಬಿಜೆಪಿಗೆ ಬಂದ ನಾವು, ಮನೆ‌ ಮಗಳಾಗಿದ್ದೇವೆ; ಸಚಿವ ಬಿ.ಸಿ.ಪಾಟೀಲ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

‘ಗದಗ ಹೊಸದನೇಲ್ಲ. ಅಖಂಡ ಧಾರವಾಡ ಜಿಲ್ಲೆಯ ಒಂದು ಭಾಗ. ಎಲ್ಲರೂ ನಮ್ಮವರೇ ಇದ್ದಾರೆ. ಸಹಕಾರ ಸಿಗುತ್ತದೆ ಎಂಬ ಭರವಸೆ ಇದೆ. ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ಜಿಲ್ಲೆಯ ಜನರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸ‌ ಮಾಡಲಾಗುವುದು’ ಎಂದು ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದರು.

ಗುರುವಾರ ನಗರದಲ್ಲಿ‌ ನಿರ್ಮಾಣವಾಗುತ್ತಿರುವ ಬಿಜೆಪಿ ಕಟ್ಟಡ ಕಾಮಗಾರಿ ವೀಕ್ಷಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಗದಗ ಜಿಲ್ಲೆ ಉಸ್ತುವಾರಿ ಮಂತ್ರಿ‌ ಮಾಡುವಂತೆ ನಾನು ಕೇಳಿಕೊಂಡು ಬಂದಿಲ್ಲ. ಸರ್ಕಾರ,‌ ಮುಖ್ಯಮಂತ್ರಿ ನೇಮಕ ಮಾಡಿದ್ದಾರೆ ಬಂದಿದ್ದೇನೆ. ಯಾರು ಉಸ್ತುವಾರಿ ಇರಬೇಕೆಂಬುವುದನ್ನು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಶ್ರೀರಾಮುಲು, ಸಿ.ಸಿ.ಪಾಟೀಲ ಅವರು ಉಸ್ತುವಾರಿ ಮಂತ್ರಿ ಆಗಿದ್ದರು, ಹೀಗಾಗಿ ಅವರ ಅಭಿಮಾನಿಗಳು ಇದ್ದಾರೆ. ಆದರೆ, ಜಿಲ್ಲೆಯವರನ್ನು ಉಸ್ತುವಾರಿ ಮಂತ್ರಿ ಮಾಡಬಾರದು ಎಂಬ ಪಕ್ಷದ ನೀತಿ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಇದ್ದವನನ್ನು ಗದಗ ಉಸ್ತುವಾರಿ ಮಂತ್ರಿಯನ್ನಾಗಿ ಮಾಡಿದ್ದಾರೆ’ ಎಂದರು.

ಸಚಿವ ಸಂಪುಟದ ಕುರಿತು ಮಾತನಾಡಿದ ಅವರು, ‘ಐದು ಬೆರಳು ಒಂದೇ ಸಮನಾಗಿ ಇರುವುದಿಲ್ಲ. ಇನ್ನೂ ಐದು ಸಚಿವ ಸ್ಥಾನಗಳು ಖಾಲಿ ಇರುವುದರಿಂದ ಸಚಿವರಾಗಬೇಕೆಂಬ ಆಸೆ ಎಲ್ಲರಿಗೂ ಇರುವುದು ಸಹಜ. ಹೀಗಾಗಿ ಕೆಲವರು ಸಚಿವರಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು, ಸಚಿವ ಪುನರ್ ರಚನೆಯೋ ಅಥವಾ ಸಂಪುಟ ವಿಸ್ತರಣೆಯೋ ಎಂಬುವುದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ನಾಯಕರ ದೆಹಲಿ ಭೇಟಿ ಕುರಿತ ಪ್ರಶ್ನಗೆ ಪ್ರತಿಕ್ರಿಯಿಸಿ, ‘ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ಯಾರನ್ನು ಮಾಡಬೇಕು ಎಂದು ಬಯಸುತ್ತಾರೋ ಅವರು ಮಂತ್ರಿ ಆಗುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಸಿಎಂ ಬದಲಾವಣೆ ಸತ್ಯಕ್ಕೆ ದೂರವಾದ ಮಾತು. ಅಮಿತ್ ಶಾ, ಜೆ.ಪಿ.ನಡ್ಡಾ ಅವರು ಹೇಳಿದಂತೆ 2023ರ ಚುನಾವಣೆವರೆಗೂ ಬಸವರಾಜ್ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ’ ಎಂದು ಹೇಳಿದರು.

ಸಿಎಂ ಬದಲಾವಣೆ ಆಗುತ್ತಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಬಸವರಾಜ್ ಬೊಮ್ಮಾಯಿ ಅವರು ಆರು ತಿಂಗಳವರೆಗೆ ಮುಖ್ಯಮಂತ್ರಿ ಆಗುತ್ತಾರೆ ಅಂತಾ ಕಾಂಗ್ರೆಸ್‌ನವರಿಗೆ ಯಾರಾದರೂ ಬರೆದು ಕೊಟ್ಟಿದ್ದಾರಾ? ಅವರ ಮೇಲೆ ಅವರಿಗೆ ಅನುಮಾನವಿದೆ. ಅವರ ಕಾಲ‌ಕೆಳಗೆ
ಹಳ್ಳ ಹೊಳೆಗಳು ಹರಿಯುತ್ತಿದ್ದು, ಯಾವಾಗ ಕಾಲುಜಾರಿ ಬೀಳುತ್ತಾರೋ ಗೊತ್ತಿಲ್ಲ. ಏಕೆಂದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಕಚ್ಚಾಟದಿಂದಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಪತನವಾಗಲಿದೆ’ ಎಂದು ಭವಿಷ್ಯ ನುಡಿದರು.

ಶಾಸಕ ಬಸವನಗೌಡ ಪಾಟೀಲ್ ಅವರ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದೆ‌. ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಆಗುತ್ತಿದ್ದು, ನಿಂತಿಲ್ಲ ಎಂದರು.

ರೇಣುಕಾಚಾರ್ಯ ಅವರು ‘ಯಾವ ಸಚಿವರು ಸ್ಪಂದಿಸುತ್ತಿಲ್ಲ ಎನ್ನುವುದನ್ನು ಹೇಳಲಿ. ಯತ್ನಾಳ್ ಅವರು ಅವರು ಎಲ್ಲ ಸಚಿವರು ಸ್ಪಂದಿಸುತ್ತಾರೆ ಅಂತಾ ಹೇಳುತ್ತಾರೆ. ಒಬ್ಬೊಬ್ಬರು ಒಂದೊಂದು ತರ ಹೇಳುತ್ತಿದ್ದು, ಅದು ಅವರವರ ಭಾವನೆ ಎಂದು ಹೇಳಿದರು. ಗೊಂದಲ‌ ಎಲ್ಲ ಕಡೆಗೂ ಇರುತ್ತದೆ. ಒಂದು ತಾಯಿಗೆ ಐದು ಮಕ್ಕಳಿದ್ದರೂ ಐದು ಮಕ್ಕಳು ಸರಿ ಇರುವುದಿಲ್ಲ. ರೇಣುಕಾಚಾರ್ಯ ಅವರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ, ತಪ್ಪಿಲ್ಲ. ಮಂತ್ರಿ ಆಗಿಲ್ಲ ಅಂತಾ ಅಸಮಾಧಾನ ಇರಬಹುದು. ಹಾಗಾಗಿ ಹೀಗೆ ಹೇಳಿದ್ದಾರೆ’ ಎಂದರು.

ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಾಂಗ್ರೆಸ್ ನವರೇ ಬಿಜೆಪಿಗೆ ಬರುತ್ತಿದ್ದಾರೆ. ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ‌ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮಳೆ ಬಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ‌ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್ ನವರಿಗೆ ಬಿಜೆಪಿ ಮೇಲೆ ಅಷ್ಟ್ಯಾಕೆ ಮಮಕಾರ ಇದೆಯೋ ಗೊತ್ತಿಲ್ಲ. ಕಾಂಗ್ರೆಸ್ ನ ತಳಪಾಯ ‌ಕುಸಿತವಾಗಿರುವುದರಿಂದ ಬೇರೆ ಪಕ್ಷದವರನ್ನು ಕರೆತಂದು ಟಿಕೆಟ್ ‌ನೀಡಲು ಹಂಬಲಿಸುತ್ತಿದ್ದಾರೆ’ ಎಂದು ಬಿ.ಸಿ.ಪಾಟೀಲ್ ಕಿಡಿಕಾರಿದರು. ಈ ಸಂದರ್ಭದಲ್ಲಿ ಶಾಸಕ ಎಸ್ ವಿ ಸಂಕನೂರ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.


Spread the love

LEAVE A REPLY

Please enter your comment!
Please enter your name here