• ಮೇಕೆದಾಟು ಪಾದಯಾತ್ರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾನೆಷ್ಟು ಬಲಿಷ್ಠ ಎಂದು ತೋರಿಸುವ ಶಕ್ತಿ ಪ್ರದರ್ಶನ
ವಿಜಯಸಾಕ್ಷಿ ಸುದ್ದಿ, ಗದಗ:

ವಿಧಾನಸಭೆಯಲ್ಲಿ ಮಲಗಿರುವ ಕಾಂಗ್ರೆಸ್ಸಿಗರು ಇನ್ನೂ ನಿದ್ರೆಯಿಂದ ಎದ್ದಿಲ್ಲ. ಕಲಾಪ ಹಾಳು ಮಾಡಿದ್ದಕ್ಕೆ ಜನ ಛೀ, ತೂ ಅಂತಾ ಉಗೀತಿದ್ದಾರೆ. ಆರು ದಿನದ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಹಾಳು ಮಾಡಿದರೋ ಗೊತ್ತಿಲ್ಲ ಎಂದು ಕೃಷಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ‘ಅಧಿವೇಶನದಲ್ಲಿ ರಾಜ್ಯದ ಸಮಸ್ಯೆ ಚರ್ಚೆ ಮಾಡಲು ಬಿಡಲಿಲ್ಲ. ಸದನದಲ್ಲಿ ಪಲಾಯನ ಮಾಡಿದರು. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ’ ಕುಟುಕಿದರು.
‘ರಾಜ್ಯದ ಜನರ ಗಮನ ಸೆಳೆಯುವುದಕ್ಕೋಸ್ಕರ ಮೇಕೆದಾಟು 2.0 ಅಂತಾ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂಬುವುದು ಗೊತ್ತಾಗಬೇಕು. ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ. ಬಿಜೆಪಿ ಸರ್ಕಾರದ ವಿರೋಧವಂತು ಮೊದಲೇ ಇಲ್ಲ. ಕೇಂದ್ರದಿಂದ ಕ್ಲಿಯರನ್ಸ್ ಬಂದ ಕೂಡಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದ ಅವರು, ನಮ್ಮ ನೀರು ನಮ್ಮ ಹಕ್ಕು ಅಂದರೆ ಕೇವಲ ಕಾಂಗ್ರೆಸ್ಸಿಗರಿಗಷ್ಟೆ ನೀರುನಾ..? ಉಳಿದವರಿಗೆ ಸಂಬಂಧವಿಲ್ವಾ..? ಮೇಕೆದಾಟು ಇವರ ಮನೆ ಪ್ರಾಪರ್ಟಿನಾ?’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಮರೆತು ಹೋಗುತ್ತಿದೆ, ಮುಳುಗಿದೆ. ಬದುಕಿದ್ದೇವೆಂದು ತೋರಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಮೇಕೆದಾಟು ಬಗ್ಗೆ ಇಷ್ಟು ವರ್ಷ ಯಾಕೆ ಚಿಂತಿಸಲಿಲ್ಲ. ಇದೆಲ್ಲಾ ರಾಜಕೀಯ ಗಿಮಿಕ್. ಮೇಕೆದಾಟು ಡಿ.ಕೆ.ಶಿವಕುಮಾರ್ ಅವರ ಸ್ವಪ್ರತಿಷ್ಠೆಯಾಗಿದೆ.
ಡಿಕೆಶಿ ಶಕ್ತಿ ಪ್ರದರ್ಶನ, ತಾನು ಎಷ್ಟು ಬಲಿಷ್ಠ ಎಂಬುದನ್ನು ತೋರಿಸುವ ಪ್ರದರ್ಶನ ಇದಾಗಿದೆ ಎಂದ ಅವರು, ಕಾಂಗ್ರೆಸ್ಸಿಗರಿಗೆ ಉತ್ತರ ಕರ್ನಾಟಕ, ಮಹದಾಯಿ ಬಗ್ಗೆ ಚಿಂತನೆ ಇಲ್ಲ. ಹೀಗಾಗಿ ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಹರಿಹಾಯ್ದರು.
ಉಕ್ರೇನ್ ದೇಶದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಉಕ್ರೇನ್ ದೇಶದಲ್ಲಿ ಸಿಲುಕಿದ ಪ್ರತಿಯೊಬ್ಬ ಭಾರತೀಯರನ್ನು ಕರೆತರುವ ವ್ಯವಸ್ಥೆ ಆಗುತ್ತಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯದಿಂದಲೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮಾಹಿತಿ ಪಡೆದು ಎಲ್ಲರನ್ನೂ ಸುರಕ್ಷಿತವಾಗಿ
ಕರೆತರುವ ಪ್ರಯತ್ನ ನಡೆದಿದ್ದು, ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ ಬದ್ಧವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಬಜೆಟ್ ವಿಚಾರದ ಬಗ್ಗೆ ಮಾತನಾಡಿ, ‘ಬಸವರಾಜ್ ಬೊಮ್ಮಾಯಿಯವರು ಉತ್ತಮ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಗೆ ಒಪ್ಪಿಗೆಯಾಗುವ ಬಜೆಟ್ ಬರಲಿದ್ದು, ಉತ್ತರ ಕರ್ನಾಟಕಕ್ಕೆ ಈ ಬಾರಿ ಉತ್ತಮ ಸೌಲಭ್ಯ ಸಿಗಲಿವೆ’ ಎಂದು ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.