ವಲಸಿಗ ಸಚಿವ ಬಿ.ಸಿ. ಪಾಟೀಲ್ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರ ಹಿಂದೇಟು! ಮೊದಲ ಭೇಟಿಯಲ್ಲಿಯೇ ಅಪಸ್ವರ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಬಿ.ಸಿ.ಪಾಟೀಲ್ ಬುಧವಾರ ಗದಗ ಜಿಲ್ಲೆಗೆ ಮೊದಲ‌ ಬಾರಿಗೆ ಭೇಟಿ ನೀಡಿದರು. ಈ ವೇಳೆ ಸಚಿವರ ಸ್ವಾಗತಕ್ಕೆ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು‌. ಆದರೆ, ಬಿಸಿಪಿ ಅಭಿಮಾನಿಗಳು ಹಾಕಿಸಿದ್ದು ಎನ್ನಲಾದ ಬ್ಯಾನರ್ ಗಳಲ್ಲಿ ಜಿಲ್ಲಾ ಬಿಜೆಪಿಯ ಬಹುತೇಕ ಮುಖಂಡರ ಫೋಟೋಗಳು ಕಾಣಿಸಲಿಲ್ಲ.

ಇದಕ್ಕೆ ಕಾರಣ ಸಿ.ಸಿ.ಪಾಟೀಲ್ ಅವರನ್ನು ಗದಗ ಜಿಲ್ಲೆಯಿಂದ ಎತ್ತಂಗಡಿ ಮಾಡಿದ್ದಕ್ಕೆ, ಶ್ರೀರಾಮುಲು ಅವರಿಗೆ ಜಿಲ್ಲಾ ಉಸ್ತುವಾರಿ ಕೊಡದಿದ್ದಕ್ಕೆ ಹಾಗೂ ಬಿ.ಸಿ.ಪಾಟೀಲ್ ಉಸ್ತುವಾರಿ ಮಂತ್ರಿಯಾಗಿ ನೇಮಕವಾಗಿದ್ದಕ್ಕೆ ಜಿಲ್ಲಾ ಬಿಜೆಪಿ ಬಿಸಿಪಿ ವಿರುದ್ಧ ವ್ಯಕ್ತಪಡಿಸಿದ ಅಸಮಾಧಾನ ಎಂದು ಬಣ್ಣಿಸಲಾಗುತ್ತಿದೆ.

ಅವಳಿ‌ ನಗರದ ಕೆಲವು ಕಡೆಗಳಲ್ಲಿ ‌ಹಾಕಿದ್ದ ದೊಡ್ಡ ಬ್ಯಾನರ್ ಗಳಲ್ಲಿ ಮುಖಂಡರ ಫೋಟೋ ಕಾಣಿಸಿಕೊಂಡಿದ್ದು ಬಿಟ್ಟರೆ, ವಿದ್ಯುತ್ ಕಂಬಗಳಿಗೆ ನೇತು ಹಾಕಿದ್ದ ಬ್ಯಾನರ್ ಬಟ್ಟಿಂಗ್ಸ್ ನಲ್ಲಿ ಎಲ್ಲೂ ಕಾಣಿಸಿಲ್ಲ. ಕೃಷಿ ಸಚಿವ ಅಖಿಲ‌ ಕರ್ನಾಟಕ ಕೌರವ ಶ್ರೀ ಬಿ.ಸಿ.ಪಾಟೀಲ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥಗೌಡ ಪಾಟೀಲ್, ಮುಂಡರಗಿ ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ್, ಗುತ್ತಿಗೆದಾರ ಆನಂದಗೌಡ ಪಾಟೀಲ್ ಅವರ ಬ್ಯಾನರ್ ಮಾತ್ರ ನಗರದಲ್ಲಿ ರಾರಾಜಿಸುತ್ತಿದ್ದವು.

ಇನ್ನು ಸಿ.ಸಿ.ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಗದಗ-ಬೆಟಗೇರಿ ಅವಳಿ ನಗರಕ್ಕೆ ಆಗಮಿಸಿ ಅವರು ನಗರದಲ್ಲಿ ಎಲ್ಲೇ ಹೋದರು ಜೇನು ಹುಳುಗಳಂತೆ ಮುತ್ತಿಕ್ಕಿಕೊಳ್ಳುತ್ತಿದ್ದ ಮುಖಂಡರು, ಕಾರ್ಯಕರ್ತರು ಬಿ.ಸಿ.ಪಾಟೀಲರು ಬಂದಾಗ ಬೆರಳೆಣಿಕೆಯಷ್ಟು ಮುಖಂಡರು ಮಾತ್ರ ಆಗಮಿಸಿದ್ದರು. ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿಯವರು ಆರಂಭದಿಂದಲೂ ಕಾಣಿಸಲಿಲ್ಲ.

ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ‌.ಪಾಟೀಲ್ ಅವರನ್ನು ಬಾಗಲಕೋಟೆ ಜಿಲ್ಲೆಗೆ ಎತ್ತಂಗಡಿ ಮಾಡಿದ್ದು, ಬಿಜೆಪಿ ಪಾಳೆಯದಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದರು. ಮರಳಿ ಸಚಿವ ಸಿ.ಸಿ.ಪಾಟೀಲ್ ಇಲ್ಲದಿದ್ದರೆ, ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಉಸ್ತುವಾರಿ ಮಂತ್ರಿಯಾಗಿ ನೇಮಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು.


Spread the love

LEAVE A REPLY

Please enter your comment!
Please enter your name here