ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಭರವಸೆ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರಾಜ್ಯದ 6ಕಡೆ ಜವಳಿ ಪಾರ್ಕ್ ಈಗಾಗಲೇ ನಿರ್ಮಿಸಲಾಗಿದೆ. ಹಾವೇರಿ, ಉಡುಪಿ ಹಾಗೂ ರಾಯಚೂರಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.
ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆ.ಎಸ್. ನವೀನ್ ಹಾಗೂ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ರಾಜ್ಯ ಸರ್ಕಾರ 2019ರಲ್ಲಿ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ನು ಜಾರಿಗೊಳಿಸಿದೆ. ಇದರ ಅನ್ವಯ ಪ್ರತ್ಯೇಕ ಉದ್ಯಮಿ ಅಥವಾ ಎಸ್.ಪಿ.ವಿಗಳು ೧೫ ಎಕರೆ ಜಾಗ ಹೊಂದಿ ಜವಳಿ ಪಾರ್ಕ್ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ಸಹಾಯ ನೀಡಲಾಗುವುದು ಎಂದರು.
ಶಾಸಕ ಕೆ.ಎಸ್. ನವೀನ್ ಮಾತನಾಡಿ, ಜಾಗತಿಕವಾಗಿ ಪಾಕಿಸ್ತಾನ ಹಾಗೂ ಚೈನಾ ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಭಾರತ ಸಿದ್ಧ ಉಡುಪು ತಯಾರಿಕೆ ಕೇಂದ್ರವಾಗಿ ಹೊರಹೊಮ್ಮಲಿದೆ. ರಾಜ್ಯ ಸರ್ಕಾರ ಇದಕ್ಕೆ ಸಿದ್ಧವಾಗಿದ್ದು, ರಾಜ್ಯದಲ್ಲಿ ಜವಳಿ ಉದ್ಯಮಕ್ಕೆ ಬೆಂಬಲ ನೀಡಬೇಕು ಎಂದರು.
ಜವಳಿ ಪಾರ್ಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಹಾಗೂ ಉದ್ಯೋಗ ನೀಡದಿರುವ ಉದ್ದಿಮೆದಾರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೋಪ್ಪ ಭರವಸೆ ನೀಡಿದರು.